In defence of plain language
`!?#$%^&*@@??!': ಗೆಳೆಯರೇ ಇದೇನೆಂದು ದಯವಿಟ್ಟು ಗಳಹುವಿರಾ! By ಹೃಷಿಕೇಶ್ ಬಹದ್ದೂರ್ ದೇಸಾಯಿ ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ? ಅದೆಷ್ಟು ಸಾರಿ ಅವರು ಹೇಳಿದ ವಿಷಯಗಳು ನಿಮಗೆ ಅರ್ಥವಾಗಿವೆ? ಅದೆಷ್ಟು ಸಾರಿ ಅವರು ನೀಡಿದ ಹಾಳೆಗಳ ಮೇಲೆ ಪ್ರಿಂಟಾದ ವಿಷಯಗಳನ್ನು ನೀವು ಓದಿದ್ದೀರಿ? ಓದಿದ ಎಷ್ಟು ವಿಷಯ ನಿಮಗೆ ಎಷ್ಟು ಸಾರಿ ಅರ್ಥವಾಗಿದೆ? ಅದು ನಿಮ್ಮ ತಪ್ಪಲ್ಲ. ಆ ಪಾಲಿಸಿಗಳನ್ನು ಬರೆದವರ ತಪ್ಪು. ಇದು ಯಾಕೆ? ಯಾಕೆಂದರೆ, ಜಗತ್ತಿನ ಎಲ್ಲ ಮಾರಕ ರೋಗಗಳಿಗಿಂತಲೂ ಭಯಂಕರ ರೋಗ ಈಗ ನಮಗೆಲ್ಲ ಅಂಟಿಕೊಂಡಿದೆ. ಅದರ ಲಕ್ಷಣಗಳೇನೆಂದರೆ 1. ತನಗೆ ಒಂದು ಚೂರೂ ಅರ್ಥವಾಗದ ವಿಷಯದ ಬಗ್ಗೆ ಎಲ್ಲಾ ಗೊತ್ತಿದ್ದವರಂತೆ ಜೋರು ದನಿಯಲ್ಲಿ ಮಾತಾಡುವುದು ಹಾಗೂ 2. ತಾವು ಹೇಳುವ ವಿಷಯಗಳು ಇತರರಿಗೆ ತಿಳಿಯುತ್ತಿದ್ದಾವೋ ಇಲ್ಲವೋ ಎಂಬುದನ್ನು ಗಮನಿಸದೇ ಮಾತಾಡುತ್ತಾ ಹೋಗುವುದು. ಈ ವ್ಯಾಧಿಯನ್ನು ನೀವು ಸುದ್ದಿ ಮಾಧ್ಯಮಗಳಿಂದ ಹಿಡಿದು, ಜಾಹೀರಾತುಗಳು, ಸರಕಾರದ ನೀತಿಗಳು, ಈಗ ತಾನೆ ಯುರೋಪ್ ಯಾತ್ರೆ ಮುಗಿಸಿಕೊಂಡು ಬಂದ ವಿದೇಶಾಂಗ ವ್ಯವಹಾರ ಮಂತ್ರಿಗಳ ಹೇಳಿಕೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳು, ಯುನಿವರ್ಸಿಟಿಯ ಬುದ್ಧಿಜೀವಿಗಳ ಮಾತಿನಲ್ಲಿ, ಸಮಾಜದ ಅಭಿಪ್ರಾಯ ರೂಪಿಸುವ ಜವಾಬ...