How to outsource the Kannada Sahitya Sammelana
ಕನ್ನಡ ಸಮ್ಮೇಳನ ಹೊರಗುತ್ತಿಗೆ:ಒಂದು ನಿದ್ದೆಗಣ್ಣು ವರದಿ ಗಣ್ಣು ವರದಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಶುಕ್ರವಾರ, 4 ಫೆಬ್ರವರಿ 2011 (05:34 IST) ಚಿತ್ರ: ಪ್ರಕಾಶ್ ಬಾಬು ರೀ ಸಿಎಂ ಸಾಹೇಬರ ಪಿಎ ಮೀಟಿಂಗ್ ಇದೆ ಅಂತ ಹೇಳಿದ್ದಾರೆ ಏಳ್ರೀ. ಹೋಗ್ರೀ, ಅಂತ ಸಂಪಾದಕರು ರಾತ್ರಿ ಎರಡು ಗಂಟೆಗೆ ಫೋನ್ ಮಾಡಿದರು. ಇಷ್ಟೊತ್ತಿಗೆ ಎಂಥಾ ಮೀಟೀಂಗು ಸಾರ್ ಎಂದೆ. ನನಗೊತ್ತಿದ್ದರೆ ನಾನ್ಯಾಕ್ರೀ ನಿಮಗೆ ಹೇಳ್ತಿದ್ದೆ? ಸುಮ್ಮನೇ ಹೋಗ್ರೀ ಅಂತ ಚೀರಿದರು. ಇವರ‍್ಯಾಕೆ ಚೀರ‍್ತಾರೆ ಅನ್ನಿಸಿತಾದರೂ, ಸಂಪಾದಕರಾದ ಮೇಲೆ ಇಷ್ಟಾದರೂ ಚೀರದಿದ್ದರೆ ಹೇಗೆ ಅಂತ ಅರ್ಥವಾಯಿತು. ಅವರು ಕೂಗಿದ ನಂತರ ನಾನು ಎದ್ದು ನನ್ನ ಹೆಂಡತಿಯನ್ನು ಎಬ್ಬಿಸದೇ ಮುಖ ತೊಳೆದು, ಗಾಡಿ ತೆಗೆದು ಗೇಟಿಗೆ ಕೀಲಿ ಹಾಕುತ್ತಿದ್ದೆ. ಆಗ ನನ್ನ ಹೆಂಡತಿ ಕೂಗಿದಳು. “ಜಾಕೆಟ್ ತೊಗೊಂಡು ಹೋಗ್ರೀ. ಸೀಎಮ್ಮ ಮನಿ ಹತ್ತಿರ ಭಾಳ ಥಂಡಿ ಐತೆಂತ. ಮತ್ತೆ ಒಳಗೆ ಹೋಗಿ ಜಾಕೆಟ್ ಹೊದ್ದು ಹೊರಟೆ. ನಾನು ಮಾಡುವುದು ಎಲ್ಲ ಇವಳಿಗೆ ಹೇಗೆ ಗೊತ್ತಾಗುತ್ತದೆ? ಬಹುಶಃ ನನಗೆ ರೇಡಿಯೋ ಕಾಲರ್ ಹಾಕಿರಬೇಕು, ಅಂದುಕೊಂಡೆ. ಅಲ್ಲಿ ಹೋದರೆ ಸೀಎಮ್ಮ ಅವರ ಮನೆಯಲ್ಲಿ ಸೀಎಮ್ಮೇ ಇಲ್ಲ. ಸೀಎಮ್ ಮನೆಯಲ್ಲಿ ಆಗಲೇ ಪೋಲಿಸ್ ಕಮಿಷನರ್ ಅವರು, ಚೀಫ್ ಸೆಕ್ರೆಟರಿ, ಕಂಟೋನಮೆಂಟಿನ ನೀಲಿ ಕಾರಿನಿಂದ ಇಳಿದ ನೀಲಿ ಸಮವಸ್ತ್ರ ಧರಿಸಿ ನೀಲಿ ಪೇಟಾ ಸುತ್ತಿದ್ದ ಸರದಾರಜಿ ಆರ್ಮಿಯವರು, ಆ ಸಾಹೇಬರು, ಈ ಸಾಹೇಬರು, ಎಲ್ಲರೂ ನೆರೆದಿದ್ದರು. ಅಷ...