How to outsource the Kannada Sahitya Sammelana

ಕನ್ನಡ ಸಮ್ಮೇಳನ ಹೊರಗುತ್ತಿಗೆ:ಒಂದು ನಿದ್ದೆಗಣ್ಣು ವರದಿ

ಗಣ್ಣು ವರದಿ
ಹೃಷಿಕೇಶ್ ಬಹದ್ದೂರ್ ದೇಸಾಯಿ
ಶುಕ್ರವಾರ, 4 ಫೆಬ್ರವರಿ 2011 (05:34 IST)


ಚಿತ್ರ: ಪ್ರಕಾಶ್ ಬಾಬು



ರೀ ಸಿಎಂ ಸಾಹೇಬರ ಪಿಎ ಮೀಟಿಂಗ್ ಇದೆ ಅಂತ ಹೇಳಿದ್ದಾರೆ ಏಳ್ರೀ. ಹೋಗ್ರೀ, ಅಂತ ಸಂಪಾದಕರು ರಾತ್ರಿ ಎರಡು ಗಂಟೆಗೆ ಫೋನ್ ಮಾಡಿದರು. ಇಷ್ಟೊತ್ತಿಗೆ ಎಂಥಾ ಮೀಟೀಂಗು ಸಾರ್ ಎಂದೆ. ನನಗೊತ್ತಿದ್ದರೆ ನಾನ್ಯಾಕ್ರೀ ನಿಮಗೆ ಹೇಳ್ತಿದ್ದೆ? ಸುಮ್ಮನೇ ಹೋಗ್ರೀ ಅಂತ ಚೀರಿದರು. ಇವರ‍್ಯಾಕೆ ಚೀರ‍್ತಾರೆ ಅನ್ನಿಸಿತಾದರೂ, ಸಂಪಾದಕರಾದ ಮೇಲೆ ಇಷ್ಟಾದರೂ ಚೀರದಿದ್ದರೆ ಹೇಗೆ ಅಂತ ಅರ್ಥವಾಯಿತು.

ಅವರು ಕೂಗಿದ ನಂತರ ನಾನು ಎದ್ದು ನನ್ನ ಹೆಂಡತಿಯನ್ನು ಎಬ್ಬಿಸದೇ ಮುಖ ತೊಳೆದು, ಗಾಡಿ ತೆಗೆದು ಗೇಟಿಗೆ ಕೀಲಿ ಹಾಕುತ್ತಿದ್ದೆ. ಆಗ ನನ್ನ ಹೆಂಡತಿ ಕೂಗಿದಳು. “ಜಾಕೆಟ್ ತೊಗೊಂಡು ಹೋಗ್ರೀ. ಸೀಎಮ್ಮ ಮನಿ ಹತ್ತಿರ ಭಾಳ ಥಂಡಿ ಐತೆಂತ. ಮತ್ತೆ ಒಳಗೆ ಹೋಗಿ ಜಾಕೆಟ್ ಹೊದ್ದು ಹೊರಟೆ. ನಾನು ಮಾಡುವುದು ಎಲ್ಲ ಇವಳಿಗೆ ಹೇಗೆ ಗೊತ್ತಾಗುತ್ತದೆ? ಬಹುಶಃ ನನಗೆ ರೇಡಿಯೋ ಕಾಲರ್ ಹಾಕಿರಬೇಕು, ಅಂದುಕೊಂಡೆ. ಅಲ್ಲಿ ಹೋದರೆ ಸೀಎಮ್ಮ ಅವರ ಮನೆಯಲ್ಲಿ ಸೀಎಮ್ಮೇ ಇಲ್ಲ. ಸೀಎಮ್ ಮನೆಯಲ್ಲಿ ಆಗಲೇ ಪೋಲಿಸ್ ಕಮಿಷನರ್ ಅವರು, ಚೀಫ್ ಸೆಕ್ರೆಟರಿ, ಕಂಟೋನಮೆಂಟಿನ ನೀಲಿ ಕಾರಿನಿಂದ ಇಳಿದ ನೀಲಿ ಸಮವಸ್ತ್ರ ಧರಿಸಿ ನೀಲಿ ಪೇಟಾ ಸುತ್ತಿದ್ದ ಸರದಾರಜಿ ಆರ್ಮಿಯವರು, ಆ ಸಾಹೇಬರು, ಈ ಸಾಹೇಬರು, ಎಲ್ಲರೂ ನೆರೆದಿದ್ದರು.

ಅಷ್ಟೊತ್ತಿಗೆ ಸೀಎಮ್ಮ ಅವರ ಪೀಎ ಬಂದರು. ಅವರನ್ನು ಕಂಡ ಸೀನಿಯರ್ ಜರ್ನಲಿಸ್ಟೊಬ್ಬರು, `ಅಲ್ಲಯ್ಯಾ ಏನು ಎಲ್ಲ ದೊಡ್ಡವರೆಲ್ಲಾ ಬಂದು ಬಿಟ್ಟಿದ್ದಾರೆ, ಏನು ಸಮಾಚಾರ? ಏನಾದರೂ ಎಮರ್ ಜೆನ್ಸಿನಾ? ಬೆಂಗಳೂರಿಗೆ ಟೆರರಿಸ್ಟುಗಳು ಬಂದು ಬಿಟ್ಟಿದ್ದಾರಾ? ಎನ್ ಕತೆ?' ಅಂತ ಅಂದರು.

ಅಯ್ಯೋ ಅಂಥದ್ದೇನಿಲ್ಲ ಬನ್ನಿ ಸಾ, ಸಾಹಿತ್ಯ ಸಮ್ಮೇಳನದ ವಿಷಯ ಅಷ್ಟೇ. ಇಲ್ಲೇ ಮೂರನೇ ಫ್ಲೋರಲ್ಲಿ ಮೀಟಿಂಗು, ಬನ್ನಿ ಬನ್ನಿ, ಸೀಎಮ್ ಇನ್ನೇನು ಬಂದು ಬಿಡ್ತಾರೆ, ಅಂದರು.
ಪೇಪರ್ ಕಚೇರಿಗಳಲ್ಲಿ ಕೆಲಸ ಮಾಡಿ ಮಾಡಿದವರಿಗೆ ಯಾವ ಕೆಟ್ಟ ವಿಷಯಕ್ಕೂ ಗಾಬರಿಯಾಗದ, ಎಂಥ ಒಳ್ಳೆ ವಿಷಯದಲ್ಲೂ ಆಸಕ್ತಿ ಹುಟ್ಟದ ನಿರ್ಲಿಪ್ತತೆ ಬಂದು ಬಿಟ್ಟಿರುತ್ತದೆ. ನಾನೂ ಅದೇ ಹಾದಿಯಲ್ಲಿದ್ದೇನೆ. ಆ ಹೆದ್ದಾರಿಯ ಅರ್ಧದಷ್ಟು ಮೈಲುಗಲ್ಲುಗಳನ್ನು ದಾಟಿ ರಸ್ತೆ ಪಕ್ಕದ ಢಾಬಾದಲ್ಲಿ ಬೈಟೂ ಚಹಾ ಕುಡಿಯುತ್ತಿದ್ದೇನೆ. ಅಂಥ ಅರ್ಧ ನಿರ್ಲಿಪ್ತನಾದ ನನಗೇ ಶಾಕ್ ಆಯಿತು. ಹತ್ತು ವರ್ಷಗಳಲ್ಲಿ ಅಂಥ ಶಾಕ್ ಆಗಿರಲಿಲ್ಲ.

ಸಮ್ಮೇಳನಕ್ಕಾಗಿ ಮಂತ್ರಿಗಳೆಲ್ಲ ಸೇರಿ, ಸೀಎಮ್ ಮನೆಯಲ್ಲಿ ಅವರಿಲದ್ದ ಹೊತ್ತಿನಲ್ಲಿ, ರಾತ್ರಿ ಎರಡು ಗಂಟೆಗೆ ಮೀಟಿಂಗ್ ಮಾಡ್ತಾರಾ? ಸಮ್ಮೇಳನ ನಡೆಸುವುದು ಕೂಡ ಎಮರಜೆನ್ಸಿ ಆಗಿಬಿಟ್ಟಿತಾ, ಏನು ಇದು, ಎಂಥಾ ಕಾಲ ಬಂತು, ಅಂತ ಎಲ್ಲರೂ ಒಂದೇ ಸಮಯಕ್ಕೆ ಒಬ್ಬರಿಗೊಬ್ಬರು ಒಂದೇ ಪ್ರಶ್ನೆ ಕೇಳಿದೆವು. ಯಾರಿಗೂ ಏನೂ ತಿಳಿಯದಿದ್ದರಿಂದ ಒಳಗೆ ಹೋದೆವು. ಸುಮ್ಮನೇ ಕೂತೆವು.

ಅಷ್ಟೊತ್ತಿಗೆ ಹೆಲಿಕಾಪ್ಟರಿನಲ್ಲಿ ಸೀ ಎಮ್ಮು ಬಂದರು. ಗಡಬಡಿಸಿ ಒಳಗೆ ಹೋದರು. ಎಲ್ಲೋಗಿದ್ರೀ ಸಾರ್ ಅಂತ ಯಾರೋ ಅಂದರು. ಎಂಥ ಕಾಲ ಬಂತ್ರಿ, ಈಗ ತಾನೇ ಕೊಳ್ಳೆಗಾಲದಿಂದ ಬರ್ತಾ ಇದ್ದೇನೆ. ಎಲ್ಲ ಸೇರಿ ನನ್ನ ವಿರುದ್ಧ ಮಾಟ ಮಾಡಿಸಿದ್ದಾರೆ. ಅದಕ್ಕೆ ವಿರುದ್ಧ ಮಾಟ ಮಾಡೋ ಎಕ್ಸ್ ಪರ್ಟ್ ಒಬ್ಬ ಸಿಕ್ಕಿದ್ದಾನೆ ಅಂತ ನಮ್ಮ ಬ್ಲ್ಯಾಕ್ ಮ್ಯಾಜಿಕ್ ಅಡವೈಸರ್ ಹೇಳಿದರು ಅದಕ್ಕೆ ಹೋಗಿದ್ದೆ ಅಂದರು.

ಅಷ್ಟೊತ್ತಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಾಹಿತಿಗಳನ್ನು ಕರೆದುಕೊಂಡು ಬಂದು ಸೀಎಮ್ ಪಕ್ಕ ಕೂರಿಸಿದರು. ‘ಮೀಟಿಂಗ್ ಶುರು ಮಾಡೋಣ' ಅಂತ ಹೇಳಿ ವಿಡಿಯೋ ಕಾನ್ಫರನ್ಸ್ ಆರಂಭ ಮಾಡಿದರು. ಆಗ ಪರದೆಯ ಮೇಲೆ ಕಂಡಿದ್ದು ಅಮೇರಿಕದ ಹಳ್ಳಿಯೊಂದರಲ್ಲಿ ನೆಲೆಸಿರುವ ಐಟಿ ಜೀವಿಯೊಬ್ಬರ ಮನೆ. ಅವರ ಮನೆಯಲ್ಲಿ ಅನೇಕ ಕನ್ನಡಾಭಿಮಾನಿಗಳು ನೆರೆದಿದ್ದರು.

ಅಷ್ಟೊತ್ತಿಗೆ ಸೀಎಮ್ಮವರು ಜೋರಾಗಿ ಮಾತು ಆರಂಭಿಸಿದರು.
ಹೊರನಾಡಿನಲ್ಲಿ ನೆಲೆಸಿರುವ ಕನ್ನಡದ ಮಕ್ಕಳೇ, ಇಲ್ಲಿರುವ ನಾವೆಲ್ಲ ಹೇಗೇ ಇರಲಿ, ನೀವೆಲ್ಲ ನಮ್ಮ ಹೆಸರನ್ನು ಎತ್ತಿ ಹಿಡಿದಿದ್ದೀರಿ. ನೀವು ಯಶಸ್ಸು ಗಳಿಸಲು ನಿಮ್ಮ ಯುವ ಜೀವನದ ಅಮೂಲ್ಯ ಗಳಿಗೆಗಳನ್ನು ಕಂಪ್ಯೂಟರ್ ಮುಂದೆ ಕಳೆದಿದ್ದೀರಿ. ಅದರಿಂದ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಿದೆ. ಅಲ್ಲಿದ್ದುಕೊಂಡು ಇಲ್ಲಿಯ ಜೀವಿಗಳಿಗಾಗಿ ತುಡಿಯುತ್ತೀರಿ. ಈಗ ನೀವು ಇನ್ನೂ ದೊಡ್ಡ ತ್ಯಾಗ ಮಾಡುವ ಸಮಯ ಬಂದಿದೆ ಎಂದರು. ಆಗ ನನಗೆ ಲೆಕ್ಕ ಸಿಕ್ಕಿತು. ಸೀಎಮ್ಮು ಐಟಿ ಹೈಕುಳಗಳ ಹತ್ತಿರ ಸಮ್ಮೇಳನಕ್ಕಾಗಿ ಹಣ ಕೇಳುತ್ತಿದ್ದಾರೆ! ಅವರಿಗೆ ಅನುಕೂಲವಾಗಬೇಕು ಅಂತ ರಾಹುಕಾಲ ಗುಳಿಕಕಾಲ ಬಿಟ್ಟು ಈ ಕಾಲ್ ಸೆಂಟರ್ ಕಾಲದಲ್ಲಿ ಮೀಟಿಂಗು ಇಟ್ಟು ನಮ್ಮನ್ನು ಕರೆಸಿದ್ದಾರೆ! ನಾನೆಷ್ಟು ಬೇಗ ಕಂಡುಹಿಡಿದು ಬಿಟ್ಟೆ. ನಾನೆಂಥ ಬುದ್ಧಿವಂತ ಅಂತ ಎಡಗೈಯಲ್ಲಿ ಬೆನ್ನು ಚಪ್ಪರಿಸಿಕೊಂಡೆ.

ಆದರೆ ಸೀಮ್ಮು ನನ್ನ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು. ನೋಡಿ ನಮ್ಮ ಸರಕಾರ ಹಿಂದಿನ ಸರಕಾರಗಳಂತಲ್ಲ. ನಮ್ಮಲ್ಲಿ ಕನ್ನಡದ ಕೆಲಸಕ್ಕಾಗಿ ಬೇಕಾದಷ್ಟು ಹಣ ಇದೆ. ನಿಮ್ಮ ಹಣ ನಮಗೆ ಬೇಡ. ಆದರೆ ನಿಮ್ಮ ಸಮಯ, ನಿಮ್ಮ ಮ್ಯಾನೇಜ್ ಮೆಂಟ್ ಎಕ್ಸಪರ‍್ಟೈಸ್ ನಮಗೆ ಬೇಕು. ಅದಕ್ಕೇ ನಾವು ಈ ಬಾರಿಯ ಸಮ್ಮೇಳನವನ್ನು ನಿಮಗೆ ಔಟ್ ಸೋರ್ಸ್ ಮಾಡಬೇಕೆಂದಿದ್ದೇವೆ! ನನಗೆ ಒಂದೇ ದಿನದಲ್ಲಿ ಎರಡು ಬಾರಿ ಶಾಕ್ ಆಯಿತು.

ಸಭೆಯಲ್ಲಿದ್ದ ಪತ್ರಕರ್ತರು ಗುಸುಗುಸು ಮಾತಾಡಲಿಕ್ಕೆ ಆರಂಭ ಮಾಡಿದ್ದನ್ನು ನೋಡಿ ಸೀಎಮ್ಮರ ಪರಾಕಿಗರು ನಸುನಕ್ಕರು. ತುಟಿಯ ಮೇಲೆ ಕೈ ಇಟ್ಟು ಸುಮ್ಮನಿರುವಂತೆ ಸೂಚಿಸಿದರು. ಸೀಎಮ್ ಮುಂದುವರೆಸಿದರು. ಸಮ್ಮೇಳನ ನಡೆಸುವುದು ಕಷ್ಟವೇನಲ್ಲ. ಅದರಲ್ಲಿ ಇರೋದು ಮೂರೇ ಸವಾಲುಗಳು. ಒಂದು ಊಟ, ಒಂದು ಮೆರವಣಿಗೆ, ಇನ್ನೊಂದು ಬಂದ ಸರಕಾರಿ ನೌಕರರಿಗೆ ಹಾಜರಾತಿ ಪತ್ರ ಕೊಡುವುದು.

ನೋಡಿ, ಸಮ್ಮೇನದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಏನು? ಅಲ್ಲಿಗೆ ಬರುವ ಸರಕಾರಿ ನೌಕರರಿಗೆ, ಕನ್ನಡ ಶಿಕ್ಷಕರಿಗೆ, ಕನ್ನಡ ಪರೀಕ್ಷೆ ಬರೆಯುತ್ತಿರುವ ಅಧಿಕಾರಿಗಳಿಗೆ ಅಟೆಂಡೆನ್ಸ್ ಸರ್ಟಿಫಿಕೇಟು ಕೊಡುವುದು. ಈ ಓಓಡಿ ಪತ್ರಕ್ಕಾಗಿಯೇ ಅವರು ಸಮ್ಮೇಳನಕ್ಕೆ ಓಡಿ ಬರುವುದು. ಸಂಘಟಕರು ಇದನ್ನು ಮೊದಲ ದಿನವೇ ಕೊಟ್ಟರೆ ಅವರು ಪ್ರತಿನಿಧಿಗಳು ತಮ್ಮ ಹೆಂಡತಿ ಮಕ್ಕಳೊಂದಿಗೆ ರಿಸಾರ್ಟು, ಗೋವಾ, ತಿರುಪತಿ ಅಂತ ಸುತ್ತಲು ಹೋಗುತ್ತಾರೆ. ಬೇಕಾದರೆ ಇದಕ್ಕೆ ಜನಾರ್ಧನ ರೆಡ್ಡಿ ಅವರು ಹೆಲ್ಪ್ ಮಾಡುತ್ತಾರೆ. ಓಓಡಿ ಸಿಕ್ಕವರಿಗೆ ಒಂದು ಪ್ಯಾಕೇಜ್ ಮಾಡಿ ಕಳಿಸಿಕೊಡಲು ಸಮ್ಮೇಳನ ಸಭಾಂಗಣದಿಂದಲೇ ಬಸ್ಸು ಬಿಡುವಾ. ಅದರಲ್ಲೇನು? ಎಂದರು.

ಇನ್ನು ಊಟ. ಅದನ್ನು ಕೇಟರಿಂಗಿನವರಿಗೆ ಕೊಡಬಹುದು. ಸಮ್ಮೇಳನದ ಜಾಗದಲ್ಲಿ ಊಟಕ್ಕೆ ಗದ್ದಲ ಆಗಬಹುದು ಎನ್ನುವುದಾದರೆ ಪ್ರತಿನಿಧಿಗಳು ಉಳಿದುಕೊಂಡಿರುವ ಹೋಟೇಲು ರೂಮಿಗೇ ಊಟ ಕಳಿಸಬಹುದು. ಕೇಬಲ್ ಟಿವಿಯವರಿಗೆ ಹೇಳಿದರೆ ಲೈವ್ ರಿಲೇ ಕೊಡ್ತಾರೆ. ಪ್ರತಿನಿಧಿಗಳು ರೂಮಿನಲ್ಲಿಯೇ ಗೋಷ್ಠಿಗಳನ್ನು ಕೇಳಬಹುದು. ಸಭಾ ಮೈದಾನಕ್ಕೆ ಬಂದು ಬಟ್ಟೆ ಧೂಳು ಮಾಡಿಕೊಳ್ಳುವುದು ಬೇಕಾಗಿಲ್ಲ. ಸಂಘಟಕರಿಗೂ ಅನುಕೂಲ ಆಗುತ್ತೆ. ಇನ್ನು ಏನೇನು ಊಟ ಕೊಡ್ತೇವೆ ಅಂತ ದಿನಾಲೂ ಪತ್ರಿಕಾ ಕಚೇರಿಗಳಿಗೆ ಈ ಮೇಲ್ ಕಳಿಸಿಬಿಟ್ಟರೆ ಅದೇ ಸುದ್ದಿಯಾಗುತ್ತೆ. ಸಮ್ಮೇನಗಳ ಬಗ್ಗೆ ಇನ್ನೇನು ಸುದ್ದಿ ಬರುತ್ತೆ ಹೇಳಿ? ಅಂದರು. ನಮ್ಮವರಿಗೆ ಹೌದು ಅನ್ನಿಸಿದಕ್ಕೋ ಏನೋ ಸುಮ್ಮನೇ ಕೂತರು.

ಇನ್ನು ಮೆರವಣಿಗೆ. ಬೆಂಗಳೂರಿನಲ್ಲಿ ನೂರಾರು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳಿವೆ. ಅವರಿಗೆ ಯಾರಿಗಾದರೂ ಹೇಳಿದರೆ ಆಯಿತು. ಒಂದು ಸ್ವಲ್ಪ ಜನಪದ, ಒಂದು ಸ್ವಲ್ಪ ಭರತ ನಾಟ್ಯ, ಒಂದು ಸ್ವಲ್ಪ ತಮಾಷೆ ಗೊಂಬೆಗಳು, ಒಂದಿಷ್ಟು ಪೂರ್ಣ ಕುಂಭ ಹೊತ್ತ ಕಾಲೇಜು ಹುಡುಗಿಯರು, ಇಷ್ಟು ಸೇರಿಸಿ ಒಂದು ಪ್ರೋಗ್ರಾಂ ಮಾಡೀಪ್ಪಾ ಅಂದರೆ ಅವರು ಮಾಡ್ತಾರೆ. ಇದ್ಯಾವುದೂ ಕಷ್ಟ ಇಲ್ಲ. ಮಾಡಬಹುದು ಅಂದರು.

ಇನ್ನು ಅಧ್ಯಕ್ಷರ ಭಾಷಣ. ಅದು ಫಾರ್ಮುಲಾ ಸಿನೆಮಾದ ಕತೆ ಇದ್ದಂತೆ. ಐದು ಕಾಮೆಡಿ ಸೀನು, ನಾಲ್ಕು ಹಾಡು, ಮೂರು ಫೈಟು, ಒಬ್ಬ ಹೀರೋ ಎರಡು ಹೀರೋಯಿನ್ನು, ಐದು ನಿಮಿಷಕ್ಕೊಂದು ಬೆಡ್ ರೂಮು ಸೀನು ಇದ್ದರೆ ಒಂದು ಸಿನೆಮಾ ಅಲ್ಲವೇ, ಹಾಗೆ ಕಾವೇರಿ- ಕೃಷ್ಣಾ ವಿವಾದ, ಮರಾಠಿ- ತಮಿಳು ಗಲಾಟೆ, ಕಾಸರಗೋಡು- ಬೆಳಗಾವಿ ಗಡಿ ಸಮಸ್ಯೆ, ಭಾಷಾವಾರು ವಿಂಗಡನೆ, ಮಹಾಜನ್, ಗೋಕಾಕ್, ಮಹಿಷಿ, ನಂಜುಂಡಪ್ಪ ವರದಿಗಳು, ಇಂಗ್ಲಿಷ್ ಮಾಧ್ಯಮ ಸಮಸ್ಯೆ, ಕನ್ನಡಿಗರಿಗೆ ರೇಲ್ವೆ ನೇಮಕಾತಿ ಸಮಸ್ಯೆ, ಇತ್ಯಾದಿಗಳನ್ನು ರುಚಿಗೆ ತಕ್ಕಂತೆ ಸೇರಿಸಿ, ಸಣ್ಣಗೆ ಶುರುಮಾಡಿ ಜೋರಾಗಿ ಮುಗಿಸಿದರೆ ಆಯಿತು. ಅದರಲ್ಲೇನು? ಹಿಂದಿನ ಅಧ್ಯಕ್ಷರ ಭಾಷಣದ ಪುಟಗಳನ್ನು ಅಲ್ಲಲ್ಲಿ ಸೇರಿಸಿ ಪುಸ್ತಕ ಮಾಡಿದರಾಯಿತು. ಅದು ಯಾವಾಗಲೂ ಪ್ರಸ್ತುತ. ಯಾಕೆಂದರೆ ಕನ್ನಡದ ಸಮಸ್ಯೆಗಳು ಯಾವಾಗಲೂ ಪ್ರಸ್ತುತವಲ್ಲವೇ? ಅಂದರು. ಇನ್ನು ಅಧ್ಯಕ್ಷರಿಗೆ ಭಾಷಣ ಬರೆಯಲು ಟೈಂ ಇಲ್ಲದಿದ್ದರೆ ಅದನ್ನೂ ಸಹ ಒಂದು ಶಬ್ದಕ್ಕೆ ಇಷ್ಟು ಅನ್ನೋ ಲೆಕ್ಕದಲ್ಲಿ ಮಾಡಿಕೊಡುವವರಿದ್ದಾರೆ ಬಳೆಪೇಟೆಯಲ್ಲಿ. ಬೇಕಾದರೆ ನನ್ನ ಪೀಏ ನಂಬರ್ ಕೊಡ್ತಾರೆ, ಅಂದರು.

ನೀವೇ ಯಾಕೆ ಮಾಡಬಾರದು ಅಂತ ಕೇಳಬೇಡಿ. ಇಲ್ಲಿ ನಮಗೆ ತುಂಬಾ ಕೆಲಸ ಇದೆ. ಮೊದಲನೇಯದಾಗಿ ಮನೆಯಿಂದ ವಿಧಾನಸೌಧ, ವಿಧಾನಸೌಧದಿಂದ ಮನೆಗೆ ಹೋಗುವುದೇ ಕಷ್ಟವಾಗಿದೆ. ನಮ್ಮ ವಿರೋಧಿಗಳು ಹಾದಿಯಲ್ಲೆಲ್ಲ ಮಂತ್ರಿಸಿದ ಕುಂಬಳಕಾಯಿ ಇಡ್ತಾಇದ್ದಾರೆ. ಅದಕ್ಕೇ ವಿಧಾನಸೌಧವನ್ನೇ ಮನಗೆ ಶಿಫ್ಟು ಮಾಡಬೇಕೂಂತ ತಯಾರಿ ನಡೆಸಿದ್ದೇವೆ. ಇನ್ನು ನಾನು ಇಲ್ಲಿ ಮಾಡ್ತಾ ಇರೋ ಕೆಲಸವನ್ನು ಮಂತ್ರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಮಾಡ್ತಾ ಇದ್ದಾರೆ. ಅವರಿಗೆ ಟೈಂ ಇಲ್ಲ. ಐಎಎಸ್ ಅಧಿಕಾರಿಗಳಿಗೆ ಆಸಕ್ತಿ ಇಲ್ಲ. ಕನ್ನಡ ಪರ ಸಂಘಟನೆಗಳಿಗೆ ಹೋರಾಟ ಮಾಡೋದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಇನ್ನು ಸಮ್ಮೇಳನ ಯಾರು ಮಾಡಬೇಕು? ನಿನ್ನೆ ಯಾರೋ ಹೇಳಿದರು ಈ ಸಂಕ್ರಮಣ ಕಾಲದಲ್ಲಿ ಕನ್ನಡದ ಬಗ್ಗೆ ಕಳಕಳಿ ಇರೋದು ಎನ್ನಾರಾಯಿಗಳಿಗೆ ಮಾತ್ರ ಅಂತ. ಅದಕ್ಕೇ ನಿಮ್ಮನ್ನು ಕೇಳ್ತಾ ಇರೋದು. ಈಗಾಗಲೇ ಪ್ಯಾಲೇಸ್ ಗ್ರೌಂಡು ಬುಕ್ ಮಾಡಿದ್ದೇವೆ. ದಯವಿಟ್ಟು ಒಪ್ಪಕೊಳ್ಳಿ. ಕನ್ನಡಕ್ಕಾಗಿ ನೀವು ಇಷ್ಟಾದರೂ ಮಾಡಬೇಕು ಎಂದು ಗದರಿಸಿದರು. ಅವರು ಹೂಂ, ಹಾಂ ಅನ್ನುವ ಮೊದಲು ವಿಡಿಯೋ ಕಾನ್ಫರನ್ಸ್ ಬಂದ್ ಮಾಡಿದರು. ನಿಮ್ಮ ಪ್ರಶ್ನೆಗಳಿಗೆ ಸಮಯ ಇಲ್ಲ. ನಾನೇ ಅನೇಕರಿಗೆ ಪ್ರಶ್ನೆ ಆಗಿದ್ದೇನೆ ಅಂತ ಹೇಳಿ ಹೋದರು. ಅಷ್ಟೊತ್ತಿಗೆ ಬೆಳಕಾಗುತ್ತಿತ್ತು. ಎದ್ದು ಕಚೇರಿಗೆ ಹೋದೆವು. ನೈಟ್ ಶಿಫ್ಟಿನ ಜೀವಿಗಳು ಹೋಗಿಯಾಗಿತ್ತು. ಕಸ ಹೊಡೆಯುವವರು ಇನ್ನೂ ಬಂದಿದ್ದಿಲ್ಲ. ಸಾವಿರಾರು ಪ್ರೆಸ್ ನೋಟುಗಳು ಯಾರ ಅಂಕೆಗೂ ಸಿಗದಂತೆ ಎಲ್ಲೆಂದರಲ್ಲಿ ಬಿದ್ದಿದ್ದವು, ಸುಂದರಿಯ ಹೆಗಲ ಮೇಲಿನ ಕೂದಲಂತೆ. ಅದರಲ್ಲೇ ಜಾಗ ಹುಡುಕಿ ಕುಳಿತು ಸುದ್ದಿ ಬರೆದೆ. ಸಂಪಾದಕರಿಗೆ ರಜಾ ಚೀಟಿ ಬರೆದಿಟ್ಟು ಮನೆಗೆ ಹೋಗಿ ಕಣ್ಣು ತೆರೆದುಕೊಂಡೇ ನಿದ್ದೆಮಾಡಿದೆ

ಮರುದಿನ ಬೆಳಿಗ್ಗೆ ಪೇಪರ್ ಓದುವಾಗ ಮೂರನೇ ಶಾಕ್ ಆಯಿತು.
“ರಾಜ್ಯ ಸರಕಾರವು ಈ ಸಾಲಿನ ಸಮ್ಮೇಳನವನ್ನು ಅಮೇರಿಕದಲ್ಲಿ ಆಯೋಜಿಸಲು ನಿರ್ಧರಿಸಿದೆ. ಅಲ್ಲಿನ ಕನ್ನಡಾಭಿಮಾನಿಗಳು ಬರಾಕ್ ಒಬಾಮಾ ಅವರ ಸ್ನೇಹಿತರಾದ ಕನ್ನಡಿಗರೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಯೂರೋಪು, ಅಮೇರಿಕೆ ಯ ಸಂಸತ್ತು ಗಳಿಗೆ ಆಯ್ಕೆಯಾದ ಭಾರತೀಯ ಸಂಜಾತರನ್ನು ಅತಿಥಿಗಳೆಂದು, ಆಹ್ವಾನಿಸಲಾಗಿದೆ. ಸಮ್ಮೇಳನದ ಉದ್ಘಾಟನೆ, ಗೋಷ್ಠಿಗಳು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವನ್ನೂ ಯೂಟ್ಯೂಬ್ ನಲ್ಲಿ ಹಾಕಲಾಗುವುದು. ಅದನ್ನು ನೋಡಿದವರಿಗೆ ಓಓಡಿ ಪತ್ರ ನೀಡಲಾಗುವುದು. ಅದನ್ನು ಬಳಸಿ ಪ್ರವಾಸ ಹೋಗಲಿಕ್ಕ ಅನುಕೂಲವಾಗುವಂತೆ ಸರಕಾರಿ ನೌಕರರಿಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ. ಮೊನ್ನೆ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾನು ಸಿಟ್ಟು ಮಾಡಿಕೊಂಡೇ ಆಫೀಸಿಗೆ ಹೋದೆ. ಸಂಪಾದಕರ ಹತ್ತಿರ ಜಗಳ ಮಾಡಿದೆ. ಎಷ್ಟು ದೊಡ್ಡ ತಪ್ಪು ಸಾರ್ ಇದು. ಅಲ್ಲ ಸಾರ್, ಮೀಟಿಂಗಿಗೆ ಹೋದವನು ನಾನು. ನಾನು ಹೇಳಿದ್ದು ಫೈನಲ್ ಆಗಬೇಕೇ ಹೊರತು, ಇಲ್ಲಿ ಕಚೇರಿಯಲ್ಲಿ ಕುಳಿತು ನಾನು ಬರೆದದ್ದನ್ನು ತಿದ್ದಿದವನು ಹೇಳಿದ್ದಲ್ಲ. ಎನ್ನಾರಾಯಿಗಳು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿಗೆ ಬಂದು ಸಮ್ಮೇಳನ ಮಾಡ್ತಾರೆ ಅಂತ ಸೀಎಮ್ಮು ಹೇಳಿದರು. ಅದನ್ನು ಬಿಟ್ಟು ಅಮೇರಿಕೆಯಲ್ಲಿ ಮಾಡ್ತಾರೆ ಅಂತ ಬಂದಿದೆ. ಇದು ಅನ್ಯಾಯ ಅಲ್ಲ ಅಂದರೆ ಏನು ಸಾರ್ ಅಂದೆ.
ಅಯ್ಯೋ ನೀವು ಹೋದ ಮೇಲೆ ಸೀಎಮ್ ಆಫೀಸಿನಿಂದ ಒಂದು ಪತ್ರ ಕಳಿಸಿದರಪ್ಪ, ಎನ್ನಾರಾಯಿಗಳು ನಾವು ಬೆಂಗಳೂರಿಗೆ ಬರಕ್ಕಾಗಲ್ಲ, ಇಲ್ಲೇ ಸಿಲಿಕಾನ್ ವ್ಯಾಲಿಯಲ್ಲೇ ಮಾಡ್ತೇವೆ ಅಂತ ಮೇಲ್ ಕಳಿಸಿದರಂತೆ. ಅದಕ್ಕೇ ಸುದ್ದಿ ಬದಲಾಯಿತು, ಅಂದರು.ಸಂಪಾದಕರು ನಕ್ಕರು. ನಾನು ಅವರ ನಗುವಿನ ಹಿಂದೆ ಏನಿರಬಹುದು ಎಂದು ಯೋಚಿಸುತ್ತಾ ಕ್ಯಾಂಟೀನಿಗೆ ಹೋದೆ.

Comments

Popular posts from this blog

``All Muslims are not Terrorists, But all Terrorists are Muslims''

Black Buck resort in Bidar by Jungle Lodges and Resorts

Integrated farming