Democracy for Dummies- III- What is Jan Lokpal Bill?

Site Web
ಬಡಪಾಯಿಗಳಿಗೆ ಜನ ಲೋಕಪಾಲ್ ಮಸೂದೆ:ಹೃಷಿಕೇಶ್ ಪಾಯಿಂಟುಗಳು
ಹೃಷಿಕೇಶ್ ಬಹದ್ದೂರ್ ದೇಸಾಯಿ
ಸೋಮವಾರ, 11 ಏಪ್ರಿಲ್ 2011 (04:55 IST)
(ಚಿತ್ರ:ಪ್ರಕಾಶ್ ಬಾಬು)

ಆ ರಾಳೆಗಾಂವ ಸಿದ್ಧಿಗೆ ಹೋಗಿ ಅಣ್ಣಾ ಹಜಾರೆ ಅವರ ಬಗ್ಗೆ ಸುದ್ದಿ ಮಾಡಿ ಎಂದು ನನಗೆ ಸಂಪಾದಕರು ಹೇಳಿ ನೂರಾ ಇಪ್ಪತ್ತು ವರ್ಷಗಳಾಗಿದ್ದವು. ಆದರೆ ನಾನು ಮಾಡಿರಲಿಲ್ಲ. ಪತ್ರಕರ್ತನಿಗೇನು ಮರ್ಯಾದೆ ಇಲ್ಲವೇ? ಸಂಪಾದಕರು ಹೇಳಿದ್ದೆಲ್ಲ ಮಾಡಿಬಿಡೋದೆ? ಅವರು ದೆಹಲಿಗೆ ಹೋಗಿ ಊಟ ಬಿಟ್ಟಾಗಲೂ ನಾನು ಬರೆಯಲಿಲ್ಲ. ಛೆ! ನಮ್ಮಂತಹವರು ಇಂತಹ ಗಂಭೀರ ವಿಷಯಗಳನ್ನೆಲ್ಲ ಬರೆದರೆ ಹೇಗೆ ಅಂತ ಸುಮ್ಮನಿದ್ದೆ.

ಆದರೆ ಕೊನೆಗೆ ವಾಗ್ದೇವಿ ನನ್ನ ಕೈ ಹಿಡಿದು ನನ್ನ ಬೆರಳುಗಳನ್ನು ಕೀಬೋರ್ಡಿಗೆ ಮುಟ್ಟಿಸಲೇಬೇಕಾದ ದಿನ ಬಂತು. ಆ ಮರೆಯಲಾರದ ಘಳಿಗೆ ಯಾವುದೆಂದರೆ ಮುಖ್ಯಮಂತ್ರಿ ಯಡ್ಡ್ಯೂರಪ್ಪನವರು ಅಣ್ಣಾಗೆ ಹಜಾರ್ ವಂದನೆಗಳನ್ನು ಹೇಳಿ ಅವರನ್ನು ಬೆಂಬಲಿಸಿದ ಕ್ಷಣ. ನನಗೆ ಎಂಥಾ ಖುಶಿ ಆಯಿತು ಎಂದರೆ ಆ ಅನುಭೂತಿಯನ್ನು ವರ್ಣಿಸಲು ಪದಗಳೆ ಸಿಗುತ್ತಿಲ್ಲ.ಎರಡು ದಿನಗಳ ಮೇಲೆ ಯಡ್ಡ್ಯೂರಪ್ಪ ಅವರ ಇನ್ನೊಂದು ಹೇಳಿಕೆ ಹೊರ ಬಂತು- “ಕೇಂದ್ರ ಸರಕಾರ ಲೋಕಪಾಲ್ ಮಸೂದೆ ರೂಪಿಸುವಾಗ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ಕೇಳಬೇಕು”. ಆಗ ಮುಖ್ಯಮಂತ್ರಿಗಳ ಪಾದ ಕಮಲಗಳಿಗೆ ಮನಸ್ಸಿನಲ್ಲೇ ಸಾಷ್ಟಾಂಗ ನಮನಗಳನ್ನೂ ಸಲ್ಲಿಸಿಬಿಟ್ಟಿದ್ದೆ.

ಅದೆಲ್ಲಾ ಇರಲಿ, ಹಜಾರೆ ಸಾಹೇಬರು ನಾಲ್ಕು ದಿನ ಉಪವಾಸ ಮಾಡುತ್ತೇನೆಂದು ಹೇಳಿ ರಾಜಕಾರಣಿಗಳ, ಐಎಎಸ್‌ಗಳ ತಲೆ ತಿಂದಿದ್ದು ಏಕೆ? ಈಗ ಇರುವ ಕಾನೂನಿಗೂ, ಅವರು ಶಿಫಾರಸು ಮಾಡುತ್ತಿರುವ ಕಾನೂನಿಗೂ ವ್ಯತ್ಯಾಸ ಏನು? ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ಅದು ಇಡೀ ವ್ಯವಸ್ಥೆಯ ಬಗ್ಗೆ, ಅಂತ ಅವರು ಹೇಳಿದರಲ್ಲ, ಹಂಗಾದರೆ ಈ ವ್ಯವಸ್ಥೆಯಲ್ಲಿ ಬದಲಾಗಬೇಕಾದ್ದು ಏನಿದೆ. ಕೊನೆಗೆ, ಈ ಜನ ಲೋಕಪಾಲ್ ಮಸೂದೆಯಲ್ಲಿ ಇರುವುದಾದರೂ ಏನು? ಇದನ್ನು ಮೊದಲು ನಾನು ತಿಳಿದುಕೊಂಡರಲ್ಲವೇ ಬೇರೆಯವರಿಗೆ ಹೇಳುವುದು, ಹೀಗಾಗಿ ಅದರ ಬಗ್ಗೆ ಓದಲು ಶುರು ಮಾಡಿದೆ.

೧. ಲೋಕಪಾಲ್ ಬಿಲ್ ಅಧಿಕಾರಿಗಳು ಮಾಡಿ, ರಾಜಕಾರಣಿಗಳು ಚರ್ಚಿಸಿದ್ದು. ಜನಲೋಕಪಾಲ ಬಿಲ್ ಎನ್ನುವುದು ಸರಕಾರೇತರ ಸಂಸ್ಥೆಗಳು ಮಾಡಿದ್ದು. ಮಾಹಿತಿ ಹಕ್ಕು ಹೋರಾಟಗಾರ ಅರವಿಂದ ಕೇಜರಿವಾಲ್, ವಕೀಲ ಶಾಂತಿಭೂಷಣ್ ಹಾಗೂ ಲೋಕಾಯುಕ್ತ ಸಂತೋಷ ಹೆಗ್ಡೆ ಸೇರಿ ತಯಾರಿಸಿದ್ದು. ಚುನಾಯಿತ ಪ್ರತಿನಿಧಿಗಳಲ್ಲದ ಸಾಮಾನ್ಯ ಜನರಿಂದ ಬಂದಿದ್ದಾದ್ದರಿಂದ ಇದು ಜನ ಲೋಕಪಾಲ್ ಬಿಲ್.

೨. ಜನಲೋಕಪಾಲ್ ಬಿಲ್‌ನಲ್ಲಿ, ಭ್ರಷ್ಟಾಚಾರಕ್ಕೆ ಲಂಚ ತೆಗೆದುಕೊಳ್ಳುವುದು ಎಂಬ ಸೀಮಿತ ಅರ್ಥ ಇಲ್ಲ. ಮಾಡಬೇಕಾದ ಕೆಲಸ ಮಾಡದೇ ಇರುವುದು, ಬೇಕಾದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು, ಭ್ರಷ್ಟರನ್ನು ರಕ್ಷಿಸುವುದು, ನಿರಪರಾಧಿಗಳಿಗೆ ತೊಂದರೆ ಕೊಡುವುದು, ಹಿರಿಯ ಅಧಿಕಾರಿಗಳನ್ನು ದಿಕ್ಕು ತಪ್ಪಿಸುವುದು, ಸರಕಾರಿ ಕಚೇರಿಗೆ ಬರುವವರ ನಡುವೆ ಭೇದಭಾವ ಮಾಡುವುದು, ಇವೆಲ್ಲವೂ ಭ್ರಷ್ಟಾಚಾರ ಎಂದೇ ಪರಿಗಣಿಸಲ್ಪಡುತ್ತವೆ. ಈಗಿನ ಕಾನೂನಿನಲ್ಲಿ ಇಷ್ಟು ಸ್ಪಷ್ಟವಾಗಿ ಭ್ರಷ್ಟಾಚಾರದ ವ್ಯಾಖ್ಯಾನ ಇಲ್ಲ.

೩. ಯಾವುದೇ ಸರಕಾರಿ ಕಚೇರಿ, ಇಲಾಖೆ, ಉದ್ದಿಮೆಗಳು ತಾವು ಜನರಿಗೆ ನೀಡಬೇಕಾದ ಸೇವೆಗಳ ಬಗ್ಗೆ ಲೋಕಪಾಲಕ್ಕೆ ಕಾಲಕಾಲಕ್ಕೆ ತಿಳಿಸಬೇಕು. ಇವನ್ನು ತಪ್ಪಿ ನಡೆದುದರ ಬಗ್ಗೆ ಅದು ತನಿಖೆ ನಡೆಸಬಹುದು. ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆಯೂ ತನಿಖೆ ನಡೆಸಬಹುದು.

೪. ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳಲು ಇರುವ ಬೇರೆ ಬೇರೆ ಸಂಸ್ಥೆಗಳು ಒಟ್ಟಿಗೆ ಸೇರಿ ಜನಲೋಕಪಾಲದ ಅಡಿಯಲ್ಲಿ ಬರುತ್ತವೆ. ಈಗಿರುವ ಎಲ್ಲ ಇಂಥ ಸಂಸ್ಥೆಗಳಿಗಿಂತ ಹೆಚ್ಚು ಜನಲೋಕಪಾಲಕ್ಕೆ ಸ್ವಾಯತ್ತತೆ ಕೋರಲಾಗಿದೆ.

೫. ಭ್ರಷ್ಟಾಚಾರಿಗಳ ವಿರುದ್ಧ ದೂರು ಪಡೆದು, ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ತೀರ್ಪು ನೀಡುವುದು ಲೋಕಪಾಲ್ ಜವಾಬ್ದಾರಿ. ಈ ಅಧಿಕಾರಗಳು ಲೋಕಾಯುಕ್ತರಿಗೆ ಇಲ್ಲ.

೬. ಪ್ರತಿ ವರ್ಷ ಎಲ್ಲ ಸರಕಾರಿ ಅಧಿಕಾರಿಗಳು ಲೋಕಪಾಲಕ್ಕೆ ತಮ್ಮ ಆಸ್ತಿ ಘೋಷಣೆ ಮಾಡಬೇಕು. ಅವರ ಆದಾಯದ ಮೂಲಗಳಿಗಿಂತ ಹೆಚ್ಚು ಎಂದು ಇದು ಕಂಡುಬಂದರೆ ಅವರ ವಿರುದ್ಧ ದೂರು ದಾಖಲಾಗುತ್ತದೆ.

೭. ಎಲ್ಲ ಚುನಾಯಿತ ಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರಗಳಿಗೂ ಆದಾಯ ತೆರಿಗೆ ಇಲಾಖೆಯಲ್ಲಿರುವ ಅವರ ಆದಾಯದ ಮಾಹಿತಿಗೂ ವ್ಯತ್ಯಾಸ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗ ಆಸ್ತಿ ಘೋಷಣೆಯ ವ್ಯವಸ್ಥೆ ಇದೆಯಾದರೂ ಅದರ ಆಧಾರದ ಮೇಲೆ ಅವರ ಮೇಲೆ ಕ್ರಮಕೈಗೊಳ್ಳುವ ಅವಕಾಶ ಇಲ್ಲ.

೮. ಭ್ರಷ್ಟಾಚಾರವನ್ನು ಬಯಲಿಗೆಳೆದವರು ಅರ್ಥಾತ್ ಸೀಟಿ ಹೊಡೆವವರಿರಿಗೆ ಜನಲೋಕಪಾಲದಲ್ಲಿ ರಕ್ಷಣೆ ಸಿಗುತ್ತದೆ. ಈಗ ಇದು ಕೇಂದ್ರ ವಿಚಕ್ಷಣ ಆಯಕ್ತರ ಜವಾಬ್ದಾರಿ.

೯. ಪ್ರಧಾನ ಮಂತ್ರಿ, ಕೇಂದ್ರದ ಮಂತ್ರಿಗಳು, ಸುಪ್ರೀಂ ಕೋರ್ಟಿನ ನ್ಯಾಯಾಧೀಶರು, ಎಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕ ವಲಯದ ಉದ್ದಿಮೆ, ನಿಗಮ, ಮಂಡಳಿ, ಸರಕಾರದ ಸ್ವಾಯತ್ತ ಸಂಸ್ಥೆಗಳು ಹಾಗೂ ಸಹಕಾರಿ ಸಂಸ್ಥೆ, ಸಂಸತ್ತಿನ ಕಾನೂನಿನ ಅಡಿಯಲ್ಲಿ ಜಾರಿಗೆ ಬಂದ ಅಥವಾ ಸರಕಾರವೇ ಹುಟ್ಟು ಹಾಕಿದ ಯಾವುದೇ ಸಮಿತಿಯ ಸದಸ್ಯರು ಕೂಡ ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಖಾಸಗಿ ವ್ಯಕ್ತಿಗಳು ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಈಗಿರುವ ಕಾನೂನಿನಲ್ಲಿ ಈ ಅವಕಾಶ ಇಲ್ಲ.

೧೦. ಯಾವುದೇ ವ್ಯಕ್ತಿಯ ವಿರುದ್ಧ ತನಿಖೆ ಆರಂಭಿಸಲು ಅವರ ವಿರುದ್ಧ ದೂರು ಇರಲೇಬೇಕು ಎನ್ನುವ ನಿರ್ಬಂಧ ಇಲ್ಲ. ತನಗೆ ದೊರೆತ ಮಾಹಿತಿ ಮೇರೆಗೆ ಲೋಕಪಾಲರು ಯಾರ ವಿರುದ್ಧವಾದರೂ ತನಿಖೆ ಆರಂಭಿಸಬಹುದು. ಇದು ಈಗಿನ ಲೋಕಾಯುಕ್ತ ಕಾನೂನಿನಲ್ಲಿ ಇಲ್ಲ.

೧೧. ರಾಷ್ಟ್ರಾಧ್ಯಕ್ಷರು ಒಬ್ಬ ಲೋಕಪಾಲರನ್ನು ಹಾಗೂ ಹತ್ತು ಜನ ಸದಸ್ಯರನ್ನು ನೇಮಿಸುವ ಮೂಲಕ ಆ ಸಂಸ್ಥೆ ಸ್ಥಾಪಿಸಬೇಕು. ಲೋಕಪಾಲರ ಸ್ಥಾನಮಾನ, ಸಂಬಳ, ಸಾರಿಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಸಮ. ಇತರ ಸದಸ್ಯರ ಸ್ಥಾನಮಾನ, ನ್ಯಾಯಾಧೀಶರಿಗೆ ಸಮ. ಈ ಹತ್ತು ಜನರಲ್ಲಿ ನಾಲ್ವರು ಕಾನೂನು ಹಿನ್ನೆಲೆ ಇರುವವರು, ಇಬ್ಬರು ನಿವೃತ್ತ ಐಎಎಸ್ ಅಥವಾ ಇತರ ನಾಗರಿಕ ಸೇವೆ ಅಧಿಕಾರಿಗಳು ಇರಬೇಕು.

೧೨. ಇವರೆಲ್ಲರ ಅವಧಿ ಐದು ವರ್ಷ. ಯಾವುದೇ ಹುದ್ದೆ ಖಾಲಿಯಾದ ಒಂದು ತಿಂಗಳೊಳಗೆ ಅದನ್ನು ತುಂಬಬೇಕು.

೧೩. ತನ್ನ ಜೀವಮಾನದಲ್ಲಿ ಸಂಸತ್ತಿನ, ವಿಧಾನಸಭೆ, ಪರಿಷತ್ತುಗಳ ಸದಸ್ಯರಾಗಿದ್ದವರಿಗೆ ಇದರ ಸದಸ್ಯನಾಗುವ ಅವಕಾಶ ಇಲ್ಲ. ವ್ಯವಹಾರ ಮಾಡುತ್ತಿದ್ದರೆ ಅದನ್ನು ಬಿಡಬೇಕು, ನೌಕರಿ ಮಾಡುತ್ತಿದ್ದರೆ ರಾಜಿನಾಮೆ ಕೊಡಬೇಕು.

೧೪. ನಲವತ್ತು ವರ್ಷ ಮೀರಿದ, ಭಾರತದ ನಾಗರಿಕರು, ಹಿಂದೆ ಯಾವುದೇ ಕೋರ್ಟಿನಲ್ಲಿ ಶಿಕ್ಷೆ ಅನುಭವಿಸಿದವರಿಗೆ, ಪೊಲೀಸರ ಆರೋಪಪಟ್ಟಿಯಲ್ಲಿ ಹೆಸರು ಪಡೆದವರಿಗೆ, ಅವಕಾಶ ಇಲ್ಲ.

೧೫. ಭಾರತದ ಉಪರಾಷ್ಟ್ರಪತಿಗಳು ಅಧ್ಯಕ್ಷರಾಗಿದ್ದು, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ, ಇತರ ನ್ಯಾಯಾಧೀಶರು, ಮಹಾಲೇಖಪಾಲರು, ಮುಖ್ಯ ಚುನಾವಣಾ ಆಯುಕ್ತರು, ಮಾನವ ಹಕ್ಕು ಆಯೋಗದ ಅಧ್ಯಕ್ಷರು, ನಿವೃತ್ತ ಸೇನಾ ಜನರಲ್‌ಗಳೂ, ಆಯ್ಕೆ ಸಮಿತಿಯಲ್ಲಿ ಇರುತ್ತಾರೆ.

೧೬. ಆಯ್ಕೆ ಪ್ರಕ್ರಿಯೆ ಮುಕ್ತವಾಗಿರುತ್ತದೆ. ಜಾಹೀರಾತು ನೀಡಿ ಜನರಿಂದ ಶಿಫಾರಸು ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಆಹ್ವಾನಿಸಲಾಗುತ್ತದೆ. ಅಭ್ಯರ್ಥಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಕಲೆ ಹಾಕಲಾಗುತ್ತದೆ. ಆಯ್ಕೆ ಸಮಿತಿಯ ಸಭೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕರಿಗೆ ತೋರಿಸಲಾಗುವುದು.

೧೭. ನೇಮಕವಾದ ನಂತರ ಯಾರಾದರೂ ಭ್ರಷ್ಟಾಚಾರ, ಅನೈತಿಕ ವರ್ತನೆ, ಅಪರಾಧ ಎಸಗಿದರೆ, ಅವರನ್ನು ತೆಗೆಯಲಾಗುವುದು. ಲೋಕಪಾಲ ಅಥವಾ ಸದಸ್ಯರ ವಿರುದ್ಧ ಯಾರಾದರೂ ಸುರ್ಪೀಂ ಕೋರ್ಟಿಗೆ ದೂರು ನೀಡಿದರೆ, ಅದು ತನಿಖೆಗೆ ಒಳಪಡುತ್ತದೆ. ಸರಿ ಎಂದು ಕಂಡುಬಂದರೆ ಅವರನ್ನು ಸಮಿತಿಯಿಂದ ತೆಗೆದು ಹಾಕುವಂತೆ ರಾಷ್ಟ್ರಾಧ್ಯಕ್ಷರಿಗೆ ಶಿಫಾರಸು ಮಾಡಲಾಗುವುದು.

೧೮. ಯಾರಾದರೂ ದುರುದ್ದೇಶದಿಂದ, ಸುಳ್ಳು ಅರ್ಜಿ ಸಲ್ಲಿಸಿದ್ದರೆ ಅವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು.

೧೯. ಲೋಕಪಾಲ ಹಾಗೂ ಸದಸ್ಯರು ನಿವೃತ್ತಿಯ ನಂತರ ಯಾವುದೇ ಸರಕಾರಿ ಕೆಲಸ ಒಪ್ಪಕೊಳ್ಳುವಂತಿಲ್ಲ. ಚುನಾವಣೆ ನಿಲ್ಲುವಂತಿಲ್ಲ. ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಿವೃತ್ತರಾದ ಸದಸ್ಯರು, ಆ ಅವಧಿ ಮುಗಿಯುವವರೆಗೆ ಲೋಕಪಾಲ್ ಆಗಬಹುದು.

೨೦.ಲೋಕಪಾಲ್ ಸಿಬ್ಬಂದಿಯ ಭ್ರಷ್ಟಾಚಾರ ನಿಗ್ರಹಿಸುವುದು ಲೋಕಪಾಲ್ ಜಬಾಬ್ದಾರಿ.

೨೧. ಲೋಕಪಾಲ್ ತನಿಖಾಧಿಕಾರಿಗಳಿಗೆ ಪೊಲೀಸರಿಗೆ ಇರುವ ಎಲ್ಲ ಅಧಿಕಾರಗಳು ಇದ್ದು, ಕೆಲವು ಹೆಚ್ಚಿನ ಅಧಿಕಾರಗಳನ್ನೂ ನೀಡಲಾಗುತ್ತದೆ. ಲೋಕಪಾಲಕ್ಕಾಗಿಯೇ ವಿಶೇಷ ನ್ಯಾಯಾಲಯ ಆರಂಭಿಸಲಾಗುತ್ತದೆ.

೨೨. ಎಲ್ಲ ಪ್ರಕರಣಗಳ ತನಿಖೆ ಒಂದು ವರ್ಷದಲ್ಲಿ ಮುಗಿದು, ನ್ಯಾಯಾಲಯ ಕಲಾಪ ಇನ್ನೊಂದು ವರ್ಷದಲ್ಲಿ ಮುಗಿಯುವಂತೆ ಸಮಯ ನಿಗದಿ ಪಡಿಸಲಾಗಿದೆ.

೨೩. ಎಲ್ಲಾ ಕೇಸುಗಳಿಗೆ ಸಂಬಂಧಪಟ್ಟ ಎಲ್ಲ ಮಾಹಿತಿ ಸಾರ್ವಜನಿಕರಿಗೆ ಲಭ್ಯ. ತನಿಖೆ ನಡೆಯುತ್ತಿರುವಂತೆ ಎಲ್ಲ ದಾಖಲೆಗಳನ್ನು ಲೋಕಪಾಲ್ ವೆಬ್ ಸೈಟಿಗೆ ಹಾಕಲಾಗುವುದು.

೨೪. ಭ್ರಷ್ಟರಿಂದ ಸರಕಾರಕ್ಕೆ ಆದ ನಷ್ಟವನ್ನು ಅವರಿಂದ ವಸೂಲಿ ಮಾಡುವುದು, ಭ್ರಷ್ಟರ ಲೆಕ್ಕ ಮೀರಿದ ಆಸ್ತಿಯನ್ನು ಮುಟ್ಟುಗೋಲು ಹಾಕುವುದು, ಇವು ಲೋಕಪಾಲರ ಕೆಲಸ. ಈಗಿನ ಕಾನೂನುಗಳಲ್ಲಿ ಇವು ಇಲ್ಲ.

೨೫. ಭ್ರಷ್ಟ ಅಧಿಕಾರಿಯ ವಿರುದ್ಧ ತನಿಖೆ ನಡೆಯುವಾಗ ಅವನನ್ನು ಅಮಾನತ್ತು ಮಾಡಲು, ಅಥವಾ ವರ್ಗ ಮಾಡಲು ಲೋಕಪಾಲರು ಸರಕಾರಕ್ಕೆ ಆದೇಶಿಸಬಹುದು. ಇದನ್ನು ಪಾಲಿಸದಿದ್ದರೆ ಅವರು ಸರಕಾರಕ್ಕೆ ಇಂತಹ ಆದೇಶ ನೀಡುವಂತೆ ಹೈಕೋರ್ಟ್ ಮೊರೆ ಹೋಗಬಹುದು. ಅಂತಹ ಅಧಿಕಾರಿಗಳನ್ನು ವಜಾ ಮಾಡಲು ಸಹ ಆದೇಶ ಹೊರಡಿಸಬಹುದು. ತನಿಖೆಯಲ್ಲಿ ಸಿಕ್ಕಿಬಿದ್ದ ಮಂತ್ರಿ ಅಥವಾ ಸಂಸತ್ ಸದಸ್ಯರನ್ನು ವಜಾ ಮಾಡುವಂತೆ ರಾಷ್ಟ್ರಾಧ್ಯಕ್ಷರಿಗೆ ಶಿಫಾರಸು ಮಾಡಬಹುದು.

೨೬. ಲೋಕಪಾಲಕ್ಕಾಗಿಯೇ ಒಂದು ವಿಶೇಷ ತನಿಖಾದಳ ಇರುತ್ತದೆ. ಇದರ ಅಧಿಕಾರಿಗಳ ಸ್ಥಾನಮಾನ, ಅಧಿಕಾರಗಳು ಸಿಬಿಐ ಅಧಿಕಾರಿಗಳಿಗೆ ಸಮ. ಇದಲ್ಲದೇ ಸಿಬಿಐನ ಭ್ರಷ್ಟಾಚಾರ ವಿರೋಧಿ ದಳವನ್ನು ಲೋಕಪಾಲದಲ್ಲಿ ವಿಲೀನಗೊಳಿಸಲಾಗುವುದು.

೨೭. ಲೋಕಪಾಲದ ಯಾವುದೇ ನಿರ್ಣಯವನ್ನು ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ. ಲೋಕಪಾಲ ಅಥವಾ ಸದಸ್ಯರ ವಿರುದ್ಧ ಅವರ ವೃತ್ತಿ ನಿರ್ಧಾರಗಳಿಗೆ ಸಂಬಂಧಪಟ್ಟಂತೆ ಯಾವುದೇ ನ್ಯಾಯಾಲಯದಲ್ಲಿ ಕೇಸು ಹಾಕುವಂತಿಲ್ಲ.

೨೮. ಚುನಾಯಿತ ಪ್ರತಿನಿಧಿಗಳು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಅಥವಾ ಯಾವುದಾದರೂ ವಿಷಯಕ್ಕೆ ಬೆಂಬಲ ಅಥವಾ ವಿರೋಧ ಸೂಚಿಸಲು ಲಂಚ ಕೇಳಿದ ದೂರು ಅಥವಾ ಆರೋಪ ಕೇಳಿ ಬಂದಲ್ಲಿ, ಅವರು ಸದಸ್ಯರಾಗಿರುವ ಸಭೆಯ ಸಭಾಪತಿ/ ಅಧ್ಯಕರಿಗೆ ಆ ದೂರನ್ನು ನೀಡಲಾಗುವುದು. ಅವರು ಸದನದ ನೈತಿಕತೆ ಸಮಿತಿಗೆ ಒಂದು ತಿಂಗಳೊಳಗೆ ಅದನ್ನು ವರ್ಗಾಯಿಸಬೇಕು. ಅದನ್ನು ಲೋಕಪಾಲರಿಗೆ ಒಪ್ಪಿಸಬೇಕೋ ಬೇಡವೋ ಎನ್ನುವುದನ್ನು ಅದು ಒಂದು ತಿಂಗಳೊಳಗೆ ತೀರ್ಮಾನಿಸಬೇಕು.

೨೯. ಸಾರ್ವಜನಿಕರು ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಮಾಹಿತಿ ಹಕ್ಕಿನಡಿ ಪಡೆಯಬಹುದು. ತನಿಖೆಗೆ ತೊಂದರೆಯಾಗದಿದ್ದರೆ ತನಿಖೆ ಸಮಯದಲ್ಲಿ ಸಹ ಪಡೆಯಬಹುದು. ಈ ಅವಕಾಶ ಈಗ ಇಲ್ಲ.

೩೦. ಭ್ರಷ್ಟಾಚಾರದ ವಿರುದ್ಧ ದೂರು ನೀಡಿದವರಿಗೆ ಮುಟ್ಟುಗೋಲು ಹಾಕಿದ ಆಸ್ತಿಯ ಶೇಕಡಾ ೧೦ ಭಾಗ ನೀಡಿ, ದೂರು ನೀಡುವವರನ್ನು ಪ್ರೋತ್ಸಾಹಿಸಲಾಗುವುದು. ಲೋಕಪಾಲ್ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಬೇಕಾದ ಕ್ರಮ ಕೈಗೊಳ್ಳಬಹುದು.

೩೧. ತನಗೆ ಬೇಕಾದ ಕಾಯಿದೆ, ನೀತಿ, ನಿಯಮ ರೂಪಿಸುವುದು ಲೋಕಪಾಲ್ ಹಕ್ಕು.

೩೨. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಇತರ ಎಲ್ಲಾ ಕಾನೂನುಗಳಿಗಿಂತ ಇದು ಹೆಚ್ಚು ಪ್ರಮುಖವಾದ್ದು. ಇತರ ಕಾನೂನುಗಳೊಂದಿಗೆ ಇದರ ನಿಯಮಗಳು ಸಂಘರ್ಷಕ್ಕೆ ಬಿದ್ದರೆ ಇದೇ ಅಂತಿಮ ಸತ್ಯ ಎಂದು ಪರಿಗಣಿಸಲಾಗುವುದು.

ಇದೆಲ್ಲಾ ಸರಿ, ಆದರೆ ಕೇಂದ್ರ ಸರಕಾರ ಇಂತಹ ಆದರ್ಶವಾದ ಕಾನೂನನ್ನು ಒಪ್ಪುತ್ತದೆಯೇ? ನನಗೆ ವಿಶ್ವಾಸ ಇಲ್ಲ. ಲೋಕಪಾಲ್ ಸಮಿತಿಯಲ್ಲಿ ಐದು ಜನ ಕೇಂದ್ರ ಸಚಿವರಿದ್ದಾರೆ ಎಂದರೆ ಐವತ್ತು ಜನ ಐಎಎಸ್ ಅಧಿಕಾರಿಗಳಿದ್ದಾರೆ ಎಂದೇ ಅರ್ಥ. ಅವರು ಇಂತಹ ಸೂಕ್ಷ್ಮ ಕಾನೂನನ್ನು ಜಾರಿಗೊಳಿಸುವುದು ಕಷ್ಟ. ಇದೇ ರೂಪದಲ್ಲೇ ಅದನ್ನು ಸಂಸತ್ತಿಗೆ ಕಳಿಸಿದರೂ ಅಲ್ಲಿನ ನಮ್ಮ ಪುಣ್ಯಾತ್ಮರು ಅದನ್ನು ಅಂಗೀಕಾರ ಮಾಡುವುದು ಸುಲಭವಲ್ಲ. ಮಾಡಿದರೂ ಸಹ ಅದು ಜಾರಿಯಾಗುವಾಗ ಅದರ ಮೊನೆ ಮುರಿಯುವಂತೆ ನಮ್ಮ ಅಧಿಕಾರಶಾಹಿ ಅಲ್ಲಲ್ಲಿ ಕೆಲವು ನೀತಿ ನಿಯಮ ರೂಪಿಸಬಹುದು.

ಇದೂ ಆಗದಿದ್ದರೂ ಆ ಕಾನೂನು ಜಾರಿಯಾಗಿ ಜನಸಾಮಾನ್ಯರು ಭ್ರಷ್ಟಾಚಾರ ಫ್ರೀ ಭಾರತದಲ್ಲಿ ವಾಸಿಸುವುದು ನನಗೆ ದೂರದ ಕನಸಿನಂತೆ ಕಾಣುತ್ತದೆ. ಉದಾಹರಣೆಗೆ ಈಗ ಭಾರತದಲ್ಲಿ ಇರುವ ಅತಿ ಕಠಿಣ ಕಾನೂನುಗಳೆಂದರೆ ಅರಣ್ಯ ಕಾನೂನು, ಭಯೋತ್ಪಾದನಾ ತಡೆ ಕಾನೂನು, ವರದಕ್ಷಿಣೆ ತಡೆ ಕಾಯಿದೆ ಹಾಗೂ ಅಸ್ಪೃಶ್ಯತೆ ತಡೆಯಲು ಇರುವ ಕಾಯಿದೆಗಳು. ಇವೆಲ್ಲ ತಮ್ಮ ಗುರಿ ಮುಟ್ಟಲು ಸಂಪೂರ್ಣ ಯಶಸ್ಸು ಪಡೆದಿವೆಯೇ? ಇದಕ್ಕೆ ಹೂಂ ಅನ್ನುವವರು ಎಷ್ಟು ಜನ ಇದ್ದಾರೋ, ಇಲ್ಲ ಅನ್ನುವವರೂ ಅಷ್ಟೇ ಜನ ಇದ್ದಾರೆ.

ಯಾವ ದೇಶದಲ್ಲಿ ೧೦೦ ಕೊಲೆ ಪ್ರಕರಣಗಳಲ್ಲಿ ಕೇವಲ ಆರು ಜನರಿಗೆ ಶಿಕ್ಷೆ ಆಗುತ್ತದೋ, ಆ ದೇಶದಲ್ಲಿ ಕಾನೂನಿನಿಂದ ಸಮಾಜದ ನಡುವಳಿಕೆ ಬದಲಿಸಬಹುದು ಎನ್ನುವುದು ಆಶಾವಾದಿಗಳ ಮಾತು. ಭ್ರಷ್ಟಾಚಾರವನ್ನು ಸಂಪೂರ್ಣ ತೆಗೆದು ಹಾಕುವುದು ಕೇವಲ ಒಬ್ಬ ಲೋಕಪಾಲನ, ಹತ್ತು ಲೋಕಪಾಲ್ ಸದಸ್ಯರ, ಮೂವತ್ತು ಲೋಕಾಯುಕ್ತರ ಜವಾಬ್ದಾರಿ ಯಾಕಿರಬೇಕು? ಎಲ್ಲಾ ೧೨೧ ಕೋಟಿ ಜನರ ಜವಾಬ್ದಾರಿ ಆಗಿರಬಾರದೇಕೆ?

Comments

i want to ask ..
in these points which are the points are accepted by the Govt and which are not?

Popular posts from this blog

``All Muslims are not Terrorists, But all Terrorists are Muslims''

Black Buck resort in Bidar by Jungle Lodges and Resorts

Integrated farming