Democracy for Dummies-1
ಬಡಪಾಯಿಗಳಿಗೆ ಕೆಲವು ಡೆಮಾಕ್ರಸಿ ಪಾಠಗಳು
By ಹೃಷಿಕೇಶ್ ಬಹದ್ದೂರ್ ದೇಸಾಯಿ
ಕರುನಾಡಲ್ಲಿ ಉಂಟಾಗುತ್ತಿರುವ ತಳಮಳಗಳ ಅರಿವಾಗದೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಬಡಪಾಯಿಗಳಿಗಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿಕೊಡುವ ಕೆಲವು ಪ್ರಾಥಮಿಕ ಪಾಠಗಳು ಇಲ್ಲಿವೆ
ಸೋಮವಾರ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಟಾಖಟಿಯನ್ನು ಟಿವಿಯಲ್ಲಿ ನೋಡಿದವರಿಗೆ ಗೊಂದಲ ಆಗಿರಬಹುದು, ಏನೂ ತಿಳಿಯದೇ ಇರದಿರಬಹುದು ಅಥವಾ ಪೂರ್ವಯೋರೋಪಿನ ದೇಶದ ಕಾಮೆಡಿ ಚಿತ್ರ ನೋಡಿದ ಅನುಭವ ಆಗಿರಬಹುದು. ಅಂಥವರು ಟಿವಿ ಚಾನೆಲ್ ಅನ್ನು ಮ್ಯೂಟ್ ಆಗಿಟ್ಟಿರಬಹುದು. ಹಾಗೆಂದು ಅವರಿಗೇನೂ ಮನರಂಜನೆ ಕಮ್ಮಿ ಆಗಿರಲಿಕ್ಕಿಲ್ಲ.
ಹಾಗಾದರೆ ನಿಜವಾಗಿಯೂ ನಡೆದದ್ದೇನು? ಎನ್ನುವ ವಿಷಯದ ಬಗ್ಗೆ ಬರೆಯೋಣ ಎನ್ನಿಸಿತು. ಹೇಗೂ ಇದು ಕಂಪ್ಯೂಟರ್ಸ್ ಫಾರ್ ಡಮ್ಮೀಸ್ ಸರಣಿಯಲ್ಲಿ ಡೆಮಾಕ್ರೆಸಿ ಫಾರ್ ದ ಇನ್ ಡಿಫರೆಂಟ್ ಎಂದು ಪುಸ್ತಕರೂಪದಲ್ಲಿ ಹೊರಬರಲಿದೆ. ಕೆಂಡಸಂಪಿಗೆ ಓದುಗರಿಗಾಗಿ ಇದೊಂದು ಪೈರೆಟೆಡ್ ಕಾಪಿ.
೧. ಐದೈದು ವರ್ಷಕ್ಕೆ ಬರಬೇಕಾದ ಆದರೆ ಹಗಲೆಲ್ಲ ಬರುವ ಕಾಮೆಡಿ ಬೀದಿ ನಾಟಕಗಳಿಗೆ ಚುನಾವಣೆಗಳು ಎಂದು ಹೆಸರು.
೨. ಇಂಥಾ ಚುನಾವಣೆಗಳಲ್ಲಿ ನಾವು ನಮ್ಮ ಪರವಾಗಿ ಶಾಸನ ಮಾಡುವ ಹಾಗೂ ವಿವಿಧ ಇಲಾಖೆಗಳು ವೆಚ್ಚ ಮಾಡುವ ಹಣದ ಲೆಕ್ಕ ತಪಾಸು ಮಾಡಲು ಕಳಿಸುವ ಜನರಿಗೆ ಶಾಸಕ ಅಥವಾ ಎಮ್ಮೆಲ್ಲೆ ಎಂದು ಹೆಸರು.
೩. ತಾಯಿ ಭುವನೇಶ್ವರಿಯ ಕೃಪೆಯಿಂದ ಆರಿಸಿ ಬಂದ ಇಂಥ ಪುಣ್ಯಾತ್ಮರು ರಾಜ್ಯದಲ್ಲಿ ೨೨೪ ಜನ ಇದ್ದಾರೆ. ಇವರಲ್ಲಿ ೧೧೭ ಜನ ಬಿಜೆಪಿಯವರು. ೭೪ ಕಾಂಗ್ರೆಸ್ಸಿಗರು. ೨೮ ಜನ ಜಾತ್ಯತೀತ ಜನತಾದಳಕ್ಕೆ ಸೇರಿದವರು. ಇತರ ಆರು ಜನ ಪಕ್ಷೇತರರು. ಇವರಲ್ಲಿ ಐದು ಜನ ಬಿಜೆಪಿ ಸರಕಾರವನ್ನು ಬೆಂಬಲಿಸಿದ್ದರು.
೪. ಈ ಪಕ್ಷಾತೀತರು ಹಾಗೂ ಬಿಜೆಪಿಯ ೧೧ ಜನ ಶಾಸಕರ ಸದಸ್ಯತ್ವವನ್ನು ಸ್ಪೀಕರ್ ಕೆಜಿ ಬೋಪಯ್ಯನವರು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ರದ್ದು ಮಾಡಿದ್ದಾರೆ.
೫. ಬೂಕನಕೆರೆ ಸಿದ್ದಲಿಂಗಪ್ಪ ಯಡ್ಡೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ. ಅದಕ್ಕೂ ಮೊದಲು ಅವರು ಒಬ್ಬ ಎಮ್ಮೆಲ್ಲೆ.
೬. ಒಂದೇ ರಾಜಕೀಯ ಪಕ್ಷದ ಎಮ್ಮೆಲ್ಲೆಗಳು ಇರುವ ಗುಂಪಿಗೆ ಶಾಸಕಾಂಗ ಪಕ್ಷ ಅಥವಾ ಎಲ್.ಪಿ ಎಂದು ಹೆಸರು. ಅವರು ಚುನಾಯಿಸಿದ ನಾಯಕನನ್ನು ರಾಜ್ಯಪಾಲರು ಮುಖ್ಯಮಂತ್ರಿ ಎಂದು ನೇಮಿಸುತ್ತಾರೆ. ಬಿ.ಎಸ್.ವೈ ಅವರು ಈ ರೀತಿ ಮುಖ್ಯಮಂತ್ರಿ ಆದವರು. ಮುಖ್ಯಮಂತ್ರಿಯಾದವನ ಪಕ್ಷವೇ ಆಡಳಿತ ಪಕ್ಷ. ಆಡಳಿತದಲ್ಲಿ ಭಾಗವಹಿಸಲು ಬಯಸದ ಪಕ್ಷವೇ ವಿರೋಧ ಪಕ್ಷ. ಮಜಾ ಎಂದರೆ ವಿರೋಧ ಪಕ್ಷ ಎನ್ನುವ ಶಬ್ದ ಸಂವಿಧಾನದಲ್ಲಿ ಇದೆ. ಆಡಳಿತ ಪಕ್ಷ ಎನ್ನುವ ಶಬ್ದ ಇಲ್ಲ.
೭. ಈ ರೀತಿ ಮು.ಮ ಆದವರು ತಮ್ಮ ಎಲ್.ಪಿ.ಯ ವಿಶ್ವಾಸವನ್ನೂ, ಸದನದಲ್ಲಿ ಬಹುಮತವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಅದೆರಡರಲ್ಲಿ ಒಂದನ್ನು ಅವರು ಕಳೆದುಕೊಂಡ ದಿನದಿಂದ ಅವರ ಕುರ್ಚಿಯ ಕೆಳಗಿನ ಭೂಮಿ ಕಂಪಿಸಲಾರಂಭಿಸುತ್ತದೆ.
೮. ಈ ರೀತಿ ತಾವೇ ಆರಿಸಿದ ಮು.ಮ.ರಲ್ಲಿ ವಿಶ್ವಾಸ ಕಳೆದುಕೊಂಡವರು ಭಿನ್ನಮತೀಯರು, ಬಂಡಾಯಗಾರರು, ಅತೃಪ್ತರು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಅವರು ಆ ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಇವರೆಲ್ಲ ಭೂಪರನ್ನು ಆರಿಸಿ ಕಳಿಸಿದ ಮತದಾರರಿಗೆ ಅವರನ್ನು ವಾಪಸ್ ಕರೆಸಿಕೊಳ್ಳುವ ಅವಕಾಶ ಇಲ್ಲ. ಗ್ರೀಸ್, ಸ್ವೀಡನ್ ಮುಂತಾದ ದೇಶಗಳಲ್ಲಿ ಈ ಅಧಿಕಾರ ಮತದಾರನಿಗೆ ಇದೆ.
೯. ರಾಜ್ಯಪಾಲರು ಎಂದರೆ ಕೇಂದ್ರ ಸರಕಾರದಲ್ಲಿ ನಿವೃತ್ತಿಯ ವಯಸ್ಸನ್ನು ಮೀರಿದ, ದೆಹಲಿ ರಾಜಕೀಯ ಮಾಡಲು ತಾಕತ್ತು ಕಳೆದುಕೊಂಡ, ಪಿಂಚಣಿ ಸೌಲಭ್ಯಕ್ಕಾಗಿ ಹಪಹಪಿಸುವ ಪುಢಾರಿಗಳು ಎಂದು ಅರ್ಥವಲ್ಲ. ಅಥವಾ ಹೈದರಾಬಾದಿನಲ್ಲಿದ್ದಂತೆ ರಾಜಭವನವನ್ನು ಸ್ವಾಮಿ ನಿತ್ಯಾನಂದನ ಆಶ್ರಮವನ್ನಾಗಿ ಪರಿವರ್ತಿಸಿದವರು ಅಂತಲೂ ಅಲ್ಲ. ರಾಜ್ಯದ ಆಡಳಿತ ಸಂವಿಧಾನದ ಪ್ರಕಾರ ನಡೆಯುತ್ತಿದೆಯೋ ಇಲ್ಲವೋ ಎಂದು ನೋಡಲು ರಾಷ್ಟ್ರಾಧ್ಯಕ್ಷರು ನೇಮಿಸಿದ ಸಾಂವಿಧಾನಿಕ ಅಧಿಕಾರಿ.
೧೦. ಈ ಅಧಿಕಾರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಸಂವಿಧಾನ ಬದ್ಧವಾಗಿ ಆಡಳಿತ ನಡೆಯುತ್ತಿಲ್ಲ, ರಾಜ್ಯ ಭಾರತವನ್ನು ಬಿಟ್ಟು ಹೊರಗೆ ಹೋಗುವ ಸಂಚು ನಡೆಸುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯದ ಆಡಳಿತವನ್ನು ಕೊನೆಗಾಣಿಸಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಬಹುದು.
೧೧. ಹಿಂದಿನ ವರ್ಷಗಳಲ್ಲಿ ಮುಖ್ಯಮಂತ್ರಿಯ ಮುಖ ಸರಿಯಾಗಿಲ್ಲ ಎಂಬ ಕಾರಣದಿಂದಲೂ ದೆಹಲಿಗೆ ವರದಿ ಕಳಿಸಿದ ರಾಜ್ಯಪಾಲರು ಇದ್ದರು. ರಾಜ್ಯಪಾಲರ ವರದಿಗೆ ಕಾಯದೇ ರಾಷ್ಟ್ರಪತಿ ಆಡಳಿತ ಹೇರಿದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳೂ ಇದ್ದರು. ಬೊಮ್ಮಾಯಿ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನ ನಿರ್ಣಯದ ನಂತರ ಇದು ಸ್ವಲ್ಪ ಕಡಿಮೆ ಆದಂತೆ ಕಾಣುತ್ತದೆ ಎಂದು ಬಲ್ಲವರು ಹೇಳುತ್ತಾರೆ.
೧೨. ಚುನಾವಣೆಯ ನಂತರ ಯಾವೊಬ್ಬ ಶಾಸಕನೂ ಇತರ ಶಾಸಕರ ವಿಶ್ವಾಸ ಗಳಿಸಿ ಮುಖ್ಯಮಂತ್ರಿ ಆಗಲು ಅರ್ಹತೆ ಗಳಿಸದಿದ್ದಾಗ ರಾಜ್ಯಪಾಲರು ತಮ್ಮ ಮನ ಬಂದಂತೆ ಮಾಡಬಹುದು. ೧) ಹಾದಿಯಲ್ಲಿ ಹೋಗುವವನನ್ನು ಮುಖ್ಯಮಂತ್ರಿ ಮಾಡಿ ಇನ್ನಷ್ಟು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಹೇಳಬಹುದು. ೨) ಶಾಸನ ಸಭೆಗೆ ಲಕ್ಪ ಹೊಡೆದಿದೆ ಎಂದು ಹೇಳಿ ಸುಮ್ಮನಿರಬಹುದು. ಇದಕ್ಕೆ ಸಸ್ಪೆಂಡೆಡ್ ಎನಿಮೇಷನ್ ಎನ್ನುತ್ತಾರೆ. ೩) ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು. ೪) ಇದಾದ ನಂತರ ಇನ್ನೊಮ್ಮೆ ಚುನಾವಣೆ ನಡೆಸುವ ನಿರ್ಧಾರ ತೆಗೆದುಕೊಳ್ಳಬಹುದು.
೧೩. ನಮ್ಮ ರಾಜ್ಯದ ವಿಧಾನಸಭೆಯ ಸದಸ್ಯರ ಸಂಖ್ಯೆ ೨೨೫. ಇದರಲ್ಲಿ ಒಬ್ಬರು ಆಂಗ್ಲೋ ಇಂಡಿಯನ್ ಕೋಟಾದಲ್ಲಿ ನಾಮ ನಿರ್ದೇಶಿತವಾಗಿರುತ್ತಾರೆ ಇನ್ನುಳಿದವರು ಚುನಾವಣೆಯಲ್ಲಿ ಗೆದ್ದಿರುತ್ತಾರೆ. ಇನ್ನೊಬ್ಬರು ಸಭಾಧ್ಯಕ್ಷರು ಅಥವಾ ಸ್ಪೀಕರ್. ನಾಮನಿರ್ದೇಶಿತ ಸದಸ್ಯರು ಸರಕಾರ ಉಳಿಸಲು ಅಥವಾ ಕೆಡವಲು ಮತ ಹಾಕುವಂತಿಲ್ಲ. ಮಸೂದೆಗಳನ್ನು ಪಾಸು ಮಾಡಲು ಅಥವಾ ಫೇಲು ಮಾಡಲು ಸಹ ಅವರು ಮತ ನೀಡುವಂತಿಲ್ಲ. ಸ್ಪೀಕರ್ ಸಾಹೇಬರು ಸ್ಪಷ್ಟ ನಿರ್ಧಾರಕ್ಕೆ ಬರಲಾರದ ವಿಧೇಯಕ ಹಾಗೂ ವಿಶ್ವಾಸ ಮಂಡನೆ ಸಮಯದಲ್ಲಿ ಮಾತ್ರ ಮತ ನೀಡಬಹುದು. ಇದಕ್ಕೆ ವೆಟೋ ವೋಟ್ ಎಂದು ಹೆಸರು.
೧೪. ಇನ್ನು ಆಯಾರಾಮ್ ಗಯಾರಾಮ್ ಗಳನ್ನು ನಿಯಂತ್ರಿಸಲು ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ಬಂತು. ಆಯಾರಾಮ್ ಎಂಬ ಹೆಸರಿನ ಸಂಸತ್ ಸದಸ್ಯ ನಿಜವಾಗಿಯೂ ಇದ್ದರು. ಅವರು ತುಂಬ ಸಾರಿ ಪಕ್ಷ ಬದಲಾಯಿಸಿದ್ದರು. ಅದಕ್ಕೇ ಈ ಮಾತು.
೧೫. ಪಕ್ಷಾಂತರ ನಿಷೇಧ ಕಾಯಿದೆ ಪ್ರಕಾರ ಒಂದು ಪಕ್ಷದ ಅಭ್ಯರ್ಥಿಯಾಗಿ ಚುನಾಯಿತಗೊಂಡ ಸದಸ್ಯರು ಇನ್ನೊಂದು ಪಕ್ಷ ಸೇರಿದರೆ, ತಮ್ಮ ಪಕ್ಷದ ನಿರ್ಧಾರದ ವಿರುದ್ಧವಾಗಿ ಸದನದಲ್ಲಿ ಮತ ನೀಡಿದರೆ, ಅಥವಾ ತಾವಾಗಿಯೇ ಪಕ್ಷ ತೊರೆದು ಬೇರೆ ಪಕ್ಷ ಸೇರದೇ ಇದ್ದರೂ ಸದಸ್ಯತ್ವ ರದ್ದಾಗುವುದು. ಪಕ್ಷದಿಂದ ಅಧ್ಯಕ್ಷರು ಕೊಕ್ ಕೊಟ್ಟರೆ ಮಾತ್ರ ನಿರುಮ್ಮಳವಾಗಿ ಇರಬಹುದು. - ಆಡಳಿತ ಪಕ್ಡದ ಸರಕಾರದ ನೀತಿಯ ವಿರುದ್ಧ ಶಾಸಕರು ಮಾತಾಡುವುದು, ಸರಕಾರದ ನೀತಿಯಿಂದ ಜನರಿಗೆ ಅನ್ಯಾಯವಾಗಿದೆ ಎಂದು ನಾಯಕರು ಮಂತ್ರಿ, ಅಧಿಕಾರಿಗಳ ಮುಂದೆ ಹೇಳುವುದು, ಮುಖ್ಯಮಂತ್ರಿಗೆ ಬೆಂಬಲ ಹಿಂಪಡೆಯುವುದು ಇವೆಲ್ಲವೂ ಸದಸ್ಯತ್ವದ ರದ್ದತಿಗೆ ಕಾರಣಗಳು ಎಂದು ಸೈಬರ್ ಮುತ್ಸದ್ದಿ ಹಾಗೂ ಟೀವಿ ಹೋರಾಟಗಾರ ಅರುಣ ಜೇಟ್ಲಿ (ಸೆಲಿನಾ ಜೇಟ್ಲಿಗೆ ಸಂಬಂಧ ಇಲ್ಲ!) ಅವರು ವಾದ ಮಂಡಿಸುತ್ತಿದ್ದಾರೆ. (ಮೊಂಡ ವಾದಕ್ಕೂ, ವಾದ ಮಂಡಿಸುವುದಕ್ಕೂ ಅರ್ಧ ಅಕ್ಷರ ವ್ಯತ್ಯಾಸ ಅಲ್ಲವೇ?)
೧೬. ಪಕ್ಷೇತರ ಸದಸ್ಯರು ಚುನಾಯಿತರಾಗಿ ಆರು ತಿಂಗಳ ಒಳಗೆ ಯಾವುದಾದರೂ ಪಕ್ಷ ಸೇರಿದರೆ ಈ ಕಾನೂನು ಜಾರಿಯಾಗದು. ಬಿ.ಎಸ್.ವೈ ಅವರ ಸರಕಾರದಲ್ಲಿ ಮಂತ್ರಿಯಾಗಿದ್ದ ಐದು ಜನ ಪಕ್ಷೇತರರು ಈ ರೀತಿ ಯಾವುದೇ ಪಕ್ಷ ಸೇರಿರಲಿಲ್ಲ.
೧೭. ಪಕ್ಷೇತರರು ಯಾವುದೇ ಸದಸ್ಯನಿಗೆ "ನೀನು ಮುಖ್ಯಮಂತ್ರಿಯಾಗು. ನಿನ್ನ ಮೆರವಣಿಗೆಯಲ್ಲಿ ನಾನು ಡಾನ್ಸ್ ಮಾಡುತ್ತೇನೆ" ಎಂದು ಹೇಳಬಹುದು. ಅದನ್ನು ತಡೆಯಲು ಯಾವ ಕಾನೂನಿನಲ್ಲಿಯೂ ಅವಕಾಶ ಇಲ್ಲ.
೧೮.ರದ್ದತಿ ಆಗಲಾರದ ಸನ್ನಿವೇಶಗಳು ಎಂದರೆ: ೧)ಶಾಸಕಾಂಗ ಪಕ್ಷದ ೬೬ % ಜನ ಹೊರ ಹೋಗಿ ಪಕ್ಷ ಒಡೆಯುವುದು. ೨)ಹಾಗೆಯೇ ೬೬% ಸದಸ್ಯರು ಹೊರಹೋಗಿ ಇನ್ನೊಂದು ಪಕ್ಷದ ಜತೆ ಸೇರಿ ವಿಲೀನ ವಾಗಬಹುದು. ಇದು ೨೦೦೩ ರ ತಿದ್ದುಪಡಿಯಲ್ಲಿ ಬದಲಾಯಿತು.
೧೯. ಒಂದು ಪಕ್ಷದಿಂದ ಆರಿಸಿ ಬಂದವರು ಬೇರೆ ಪಕ್ಷ ಸೇರಿ ರಾಜೀನಾಮೆ ಕೊಟ್ಟು ಮತ್ತೆ ಹೊಸ ಪಕ್ಷದ ಚಿನ್ಹೆ, ಹಮ್ಮು, ಹೊಗಳಿಕೆ, ಹಾಡು, ಹಣ, ಇತ್ಯಾದಿಗಳನ್ನು ಬಳಸಿ ಆರಿಸಿ ಬರುವುದಕ್ಕೆ ಆಪರೇಷನ್ ಕಮಲ ಎಂದು ಹೆಸರು. ಸಿಟಿ ರವಿಯವರು ಉಪಯೋಗಿಸಿದ ಹಕಾರದ ಶಬ್ದವನ್ನು ಇಲ್ಲಿ ಉಪಯೋಗಿಸಲಾಗಿಲ್ಲ. ಕರ್ನಾಟಕಕ್ಕೆ ಇಂಥ ಸರ್ಜರಿ ಹೊಸದೆಂದು ಕಂಡರೂ ಬಿಜೆಪಿಯವರು ಗೋವಾದಲ್ಲಿ ಕೆಲವು ವರ್ಷಗಳ ಹಿಂದೆಯೇ ಉಪಯೋಗಿಸಿದ್ದರು. ಗೋವಾದಲ್ಲಿಯೂ ಪೋಸ್ಟ್ ಆಪರೇಟಿವ್ ಕಾಂಪ್ಲಿಕೇಷನ್ ಗಳು ಉಂಟಾಗಿದ್ದವು. ಕರ್ನಾಟಕದಲ್ಲಿಯೂ ಆಗುತ್ತವೆ.
೨೦. ಆಪರೇಷನ್ ಕಮಲವನ್ನು ತಡೆಯಲು ಪಕ್ಷಾಂತರ ನಿಷೇಧದ ಕಾನೂನಿನಲ್ಲಿ ಅವಕಾಶಗಳಿಲ್ಲ.
೨೧. ಆಡಳಿತ ಪಕ್ಷದ ಯಾವುದೇ ಸದಸ್ಯ ಯಾವತ್ತಾದರೂ ಮುಖ್ಯಮಂತ್ರಿಗೆ ಬೆಂಬಲ ವಾಪಸ್ ಪಡೆಯಬಹುದು. ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿಕೊಂಡು ಹೋಗಬಹುದು. ಹಾಗೆ ಮಾಡಬೇಡಿ ಎಂದು ಹೇಳುವ ಅಧಿಕಾರ ಒಬ್ಬ ಸದಸ್ಯನಿಗೆ ಮಾತ್ರ ಇದೆ. ಅವರ ಹೆಸರು ಚೀಫ್ ವಿಪ್. ಅವರು ಪಕ್ಷದ ನಿರ್ಧಾರಗಳನ್ನು ಶಾಸಕಾಂಗ ಪಕ್ಷಕ್ಕೆ ಹಾಗೂ ಸದನಕ್ಕೆ ತಿಳಿಸುವ ಜವಾಬ್ದಾರಿ ಇದೆ.
೨೨. ಈ ವಿಪ್ ನ ಮನೆಯಲ್ಲಿ ಸಿಲಿಂಡರ್ ಖಾಲಿ ಆಗಿ, ಪಕ್ಷದ ಸದಸ್ಯರೊಬ್ಬರು ಅದನ್ನು ತುಂಬಿಸಿಕೊಂಡು ಬರದೇ ಹೋದರೆ ಅವರು ಅವರ ವಿರುದ್ಧ ವಿಪ್ ನೀಡಬಹುದು. ‘ಸದನದಲ್ಲಿ ಚರ್ಚೆಗೆ ಬಂದಿರುವ ವಿಧೇಯಕ, ವಿಶ್ವಾಸಮತ ಮಂಡನೆ ನಿರ್ಣಯ ಇತ್ಯಾದಿಗಳ ಬಗ್ಗೆ ನಮ್ಮ ಪಕ್ಷದ ವಿಚಾರ ಈ ರೀತಿ ಇದೆ. ಅದರ ಪ್ರಕಾರ ನೀವು ಈ ರೀತಿ ಸದನದಲ್ಲಿ ಮತ ನೀಡಬೇಕು' ಎಂದು ಅವರು ಗರ್ಜಿಸುವುದಕ್ಕೆ ವಿಪ್ ಎಂದು ಹೆಸರು.
೨೩. ಹೆಸರಿಗೆ ತಕ್ಕಂತೆ ವಿಪ್ಪಿನ ಕೆಲಸ ಚಾಟಿ ಏಟು ಹೊಡೆಯುವುದು. ಪಕ್ಷದ ಸದಸ್ಯರು ಹಾಗು ಮುಖ್ಯಮಂತ್ರಿಗೆ ಬೆಂಬಲ ನೀಡಿದ ಪಕ್ಷೇತರರಿಗೂ ಚಾಟಿ ಏಟು ಕೊಡಬಹುದು ಎಂದು ಸುಪ್ರೀಂಕೋರ್ಟ್ ಮಾಯಾವತಿ ಸರಕಾರಕ್ಕೆ ಸಂಬಂಧಪಟ್ಟ ಒಂದು ಕೇಸಿನಲ್ಲಿ ತೀರ್ಪು ನೀಡಿದೆ. ಒಂದು ಪಕ್ಷಕ್ಕೆ ಒಂದು ಸಾರಿ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದ ಪಕ್ಷೇತರರು ಕೊನೆಯವರೆಗೂ ಅದಕ್ಕೇ ಬೆಂಬಲ ನೀಡಬೇಕು ಎಂದು ಸಹ ಆ ತೀರ್ಪಿನಲ್ಲಿ ದಾಖಲಾಗಿದೆ.
೨೪. ಇದನ್ನು ಪಾಲಿಸದ ಪಕ್ಷದ, ಅಥವಾ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರ ಮೇಲೆ ಶಿಸ್ತು ಕ್ರಮ ಕೈಕೊಳ್ಳಿ ಎಂದು ವಿಪ್ ಸಾಹೇಬರು ಸ್ಪೀಕರ್ ಸಾಹೇಬರಿಗೆ ದೂರಬಹುದು. ಅವರು ಅದನ್ನು ಕೇಳಬಹುದು, ಕೇಳಿದರೂ ಕೇಳದಂತೆ ಇರಲೂಬಹುದು.
ವಿಪ್ಪಿನ ಮಾತನ್ನು ಸ್ಪೀಕರ್ ಸಾಹೇಬರು ಸೀರಿಯಸ್ಸಾಗಿ ಪರಿಗಣಿಸಿದರೆ ಸದಸ್ಯರ ೧> ನಿರ್ದಿಷ್ಟ ಅವಧಿಗೆ ಅಮಾನತು ಮಾಡಬಹುದು, ೨> ಸದಸ್ಯತ್ವ ರದ್ದು ಮಾಡಬಹುದು, ೩> ಹೋಗಲಿ ಬಿಡು ಅಂತ ಬಿಟ್ಟು ಬಿಟ್ಟು ಅವರ ಜತೆ ಇಬ್ಬರೂ ಕೂಡಿ ಥೈಲ್ಯಾಂಡ್ ಗೆ ಫ್ಯಾಮಿಲಿ ಟೂರ್ ಹೋಗಬಹುದು. ಇವೆಲ್ಲ ಮಾಡುವ ಮೊದಲು ನೋಟೀಸ್ ನೀಡಬೇಕು. ಅದಕ್ಕೆ, ಅದರ ಉತ್ತರ ಪಡೆಯಲಿಕ್ಕೆ ಕಾನೂನಿನಲ್ಲಿ ಕಾಲಾವಧಿ ಇಲ್ಲ. ರಾಜ್ಯ ವಿಧಾನಸಭೆ ಮಾಡಿದ ನಿಯಮಗಳಲ್ಲಿ ಎಳು ದಿನ ಅಂತ ಇದೆ. (ಧರ್ಮಸಿಂಗ್ ಸಾಹೇಬರ ಕಾದಲ್ಲಿಯ ಒಂದು ಪ್ರಕರಣವನ್ನು ಸ್ಪೀಕರ್ ೨೨ ತಿಂಗಳ ಮುಂದೂಡಿದರು. ಆ ನಂತರ ಚುನಾವಣೆ ಬಂತು. ಸ್ಪೀಕರ್ ಅವರ ಅಧಿಕಾರವನ್ನು ಮತದಾರರು ಹೈಜಾಕ್ ಮಾಡಿದರು!)
೨೫. ಸಂವಿಧಾನದ ಪ್ರಕಾರ ಸದಸ್ಯತ್ವ ರದ್ದಾಗುವುದು ಚುನಾವಣಾ ಸಂಬಂಧಿ ಕಾಯಿದೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗ ರಾಜ್ಯಪಾಲರಿಗೆ ಸಲಹೆ ನೀಡಿದಾಗ ಮಾತ್ರ. ಅಂಥ ಸನ್ನಿವೇಶವೇನೂ ಈಗ ಸೃಷ್ಟಿಯಾಗಿಲ್ಲ.
೨೬. ಶಾಸಕರ ಸದಸ್ಯತ್ವ ರದ್ದಾಗಬೇಕೇ ಬೇಡವೇ ಎಂದು ನಿರ್ಧರಿಸುವ ಅಂತಿಮ ಅಧಿಕಾರ ಇರುವುದು ಸ್ಪೀಕರ್ ಅವರಿಗೆ. ಅವರ ವಿರುದ್ಧ ದೂರು ಸಲ್ಲಿಸಲು ನ್ಯಾಯಾಲಯಕ್ಕೆ ಹೋಗಲು ಅವಕಾಶ ಇಲ್ಲ. ಅವರ ನಿರ್ಧಾರ ಸಂವಿಧಾನದ ಆಶಯದ ಪ್ರಕಾರ ಇತ್ತೋ ಇಲ್ಲವೋ ಎಂದು ನ್ಯಾಯಾಲಯದ ಅಭಿಪ್ರಾಯ ಕೇಳಬಹುದಷ್ಟೆ. (ಈ ಭಾಗ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋಟ್ ತೀರ್ಪು ನೀಡಿದ್ದರಿಂದ ಇದನ್ನು ಕಾನೂನಿನಿಂದ ಕೈಬಿಡಲಾಗಿದೆ )
೨೭. ಆದರೆ ವಿಪ್ ಉಲ್ಲಂಘನೆಯಾಗಿದೆಯೇ ಎಂದು ನಿರ್ಧಾರವಾಗುವುದು ಸದನದಲ್ಲಿ ಆ ಸದಸ್ಯನ ನಡುವಳಿಕೆಯ ಆಧಾರದ ಮೇಲೆಯೆ. ಸದನದಲ್ಲಿ ಅಧಿವೇಶನ ನಡೆಯುವ ಮೊದಲೇ ವಿಪ್ ಉಲ್ಲಂಘನೆ ಆಗಿದೆಯೋ ಇಲ್ಲವೋ ಎಂಬ ನಿರ್ಧಾರಕ್ಕೆ ಸ್ಪೀಕರ್ ಗಳು ಬಂದಿದ್ದು ಅಪರೂಪ. ಆದರೆ ವಿಪ್ ಉಲ್ಲಂಘನೆಗಾಗಿ ಶಾಸಕರ ಸದಸ್ಯತ್ವವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಸ್ಪೀಕರ್ ಬೋಪಯ್ಯನವರೇನೂ ಹೇಳಿಲ್ಲ. ಶಿಸ್ತು ಮೀರಿದ ಶಾಸಕರು ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಮಾಡುತ್ತೇನೆ ಎಂದು ಮು.ಮ ಅವರು ಕೆಲವು ದಿನಗಳ ಹಿಂದೆ ಧಮಕಿ ಹಾಕಿದ್ದನ್ನು ಇಲ್ಲಿ ನೆನೆಯಬಹುದು.
೨೮. ಹೀಗಾಗಿ ಬೋಪಯ್ಯನವರು ಈ ೧೬ ಜನ ಶಾಸಕರ ಸದಸ್ಯತ್ವವನ್ನು ಯಾಕೆ ರದ್ದು ಮಾಡಿದರು ಎನ್ನುವುದು ಸ್ಪಷ್ಟವಾಗಿಲ್ಲ.
೨೯. ಸದನದ ಒಳಗೆ ಬಿಳೀ ಬಟ್ಟೆ ಹಾಕಿದ ಪೋಲಿಸರಿಗೆ ಮಾರ್ಷಲ್ ಎಂದು ಹೆಸರು. ಖಾಕಿ ಹಾಕಿಕೊಂಡ ಪೋಲಿಸರು ವಿಧಾನಸೌಧದ ಒಳಗೆ ಬರಬಾರದು ಎಂಬ ಕಾನೂನು ಇಲ್ಲ. ಸಂಪ್ರದಾಯ ಇದೆ.
೩೦. ಇನ್ನು ಸದಸ್ಯತ್ವ ರದ್ದತಿ ಶಿಸ್ತು ಕ್ರಮ ಎದುರಿಸುತ್ತಿರುವ ಶಾಸಕರು ಸದನದ ಒಳಗೆ ಬರುವಂತಿಲ್ಲ. ಅವರು ಬಂದರೆ ಅವರನ್ನು ಸ್ಪೀಕರ್ ಅವರು ಹೊರಹೋಗಲು ಹೇಳಬಹುದು. ಕೇಳದಿದ್ದರೆ ಮಾರ್ಷಲ್ ಗಳಿಗೆ ಹೇಳಿ ಹೊರ ಹಾಕಿಸಬಹುದು. ಮಾರ್ಷಲ್ ಗಳಿಗೇ ಹೊಡೆಯುವ ಶಾಸಕರು ಸಂವಿಧಾನ ರಚನೆಯ ಸಮಯದಲ್ಲಿ ಇನ್ನೂ ಹುಟ್ಟಿದ್ದಿಲ್ಲವಾದ್ದರಿಂದ ಅದರ ಬಗ್ಗೆ ಸಂವಿಧಾನ ರಚನಾ ಸಮಿತಿ ಏನೂ ಹೇಳಿಲ್ಲ.
೩೧. ಸದಸ್ಯರಲ್ಲದವರು ಸದನಕ್ಕೆ ಬಂದು ಹೊರಗೆ ಹೋಗದೇ ಅಂಗಿ ಹರಿದುಕೊಂಡು ಹಟ ಮಾಡಿದರೆ (ಅಕ್ಷರಶಃ) ಸದನವು ಸುವ್ಯವಸ್ಥಿತವಾಗಿಲ್ಲ ಎಂದು ಸ್ಪೀಕರ್ ಸಾಹೇಬರು ತೀರ್ಪು ನೀಡಬಹುದು. ಅದರಂತೆ ಸಭೆ ಬರಖಾಸ್ತು ಮಾಡಬಹುದು. ವ್ಯವಸ್ಥಿತವಾಗಿದೆ ಎಂದು ಅವರಿಗೆ ಅನ್ನಿಸಿದರೆ ಸಭೆ ನಡೆಸಬಹುದು. ಸದನ ವ್ಯವಸ್ಥಿತವಾಗಿರಲಿಲ್ಲ ಎಂದು ಸದಸ್ಯರು ಆರೋಪ ಮಾಡಬಹುದು. ರಾಜ್ಯಪಾಲರಿಗೆ ಸ್ಪೀಕರ್ ಅವರು ಹೊಡೆದಾಟ ಬಡಿದಾಟದ ನಡುವೆಯೂ ಸಭೆ ನಡೆಸಿದ್ದಾರೆ ಎಂದು ದೂರು ನೀಡಬಹುದು.
೩೨. ಸಭೆ ನಡೆಸಲು ಬೇಕಾದ ಕನಿಷ್ಠ ಸದಸ್ಯರ ಸಂಖ್ಯೆ ೨೩. (ಶೇಕಡಾ ಹತ್ತು.) ಆಡಳಿತ ಪಕ್ಷದವರು ಇಷ್ಟಿರಬೇಕು, ವಿರೋಧ ಪಕ್ಷದವರು ಇಷ್ಟಿರಬೇಕು ಎಂಬ ನಿಯಮ ಇಲ್ಲ.
೩೩. ಸದನದಲ್ಲಿನ ಎಲ್ಲ ಮತದಾನಗಳೂ ಧ್ವನಿ ಮತದಿಂದಲೇ ಮೊದಲ ಬಾರಿಗೆ ನಿರ್ಧಾರ ವಾಗುತ್ತವೆ. ಯಾವ ಸದಸ್ಯರಾದರೂ ಅದಕ್ಕೆ ವಿರೋಧ ಮಾಡಿದಾಗ ಮಾತ್ರ ತಲೆ ಎಣಿಸುವ, ಹೆಡ್ ಕೌಂಟ್, ಅಥವಾ ಪೇಪರ್ ಬ್ಯಾಲಟ್ ಉಪಯೋಗವಾಗುತ್ತದೆ. ಧ್ವನಿ ಮತಕ್ಕೆ ವಿರೋಧ ಬರದೇ ಇದ್ದಲ್ಲಿ ತಲೆ ಎಣಿಕೆ ಅಗತ್ಯ ಇಲ್ಲ.
ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ. ಕೋರಂ ಎಂದರೆ ಸಭೆ ನಡೆಸಲು ಕನಿಷ್ಟ ಎಷ್ಟು ಜನ ಸದಸ್ಯರು ಇರಬೇಕು ಎಂಬ ಪ್ರಶ್ನೆಗೆ ಉತ್ತರ.
೩೪. ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ.
೩೫. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಬೋಪಯ್ಯನವರು ಸದಸ್ಯರನ್ನು ಅನೂರ್ಜಿತಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಅಭಿಪ್ರಾಯ ನೀಡಬಹುದು.
೩೬. ಇದೆಲ್ಲ ಆಗುತ್ತಿದ್ದಂತೆ ಯಡ್ಯೂರಪ್ಪ ಅವರು ಇನ್ನೊಂದು ಬಿಳಿ ಸಫಾರಿ ಹೊಲಿಸಿಕೊಂಡು ಮಿಂಚಬಹುದು. ಅಥವಾ ಸಿದ್ರಾಮನ ಹುಂಡಿ ಸಿದ್ರಾಮಯ್ಯನವರು ಹಸಿರು ಟವೆಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಬಹುದು.
೩೭. ಅಥವಾ ಇರುವ ಒಬ್ಬ ಮಗ, ಒಬ್ಬಳೇ ಮಗಳನ್ನು ಅಮೇರಿಕೆಗೆ ಮದುವೆ ಮಾಡಿಕೊಟ್ಟು ಸ್ವಿಜರ್ ಲ್ಯಾಂಡಿಗೆ ಟೂರ್ ಹೋದ ಐ.ಎ.ಎಸ್ ಅಧಿಕಾರಿಗಳು ತಮ್ಮ ಹಳೆಯ ಸೂಟುಗಳನ್ನು ರಾಜ್ಯಪಾಲರ ಸಲಹೆಗಾರರು ಎಂದು ಮರಳಿ ಬಂದು ನಮ್ಮ ಜೀವ ತಿನ್ನಬಹುದು.
೩೮. ಅಥವಾ ನಮ್ಮ ಪ್ರಭುಗಳು ಸರಕಾರದ ಅಕಾಲಿಕ ಮರಣವನ್ನು ಘೋಷಿಸಿ ಬೆಲೆಯೇರಿಕೆಯೇ ಇಳಿಯದ ನಮ್ಮ ಗಂಟಲೊಳಗೆ ಇನ್ನೊಂದು ಚುನಾವಣೆಯನ್ನು ತುರುಕಬಹುದು.
ಅಷ್ಟಕ್ಕೂ ಡೆಮಾಕ್ರಸಿ ಎಂದರೆ ಏನು? ಇದು ಮುಖ್ಯ ಪ್ರಶ್ನೆಯೇ? ಅಥವಾ ಇದಕ್ಕೆ ಉತ್ತರ ಯಾವ ನನ್ನ ಮಗನಿಗೆ ಬೇಕಾಗಿದೆ?
ಇಷ್ಟೆಲ್ಲಾ ಬರೆದು ಮುಗಿಸುವ ಹೊತ್ತಿಗೆ ನನಗೊಂದು ಫೋನ್ ಬಂತು. ಆ ಕೆಂಡಸಂಪಿಗೆಯಲ್ಲಿ ನೀವು ಬರೀ ಶ್ರೀರಾಮುಲು ಅವರ ಬಗ್ಗೆ ಮಾತ್ರವೇ ಬರೀತೀರಿ ನಮ್ಮ ಬಗ್ಗೆ ಯಾಕೆ ಬರೆಯೋದಿಲ್ಲ ಅಂತ ನನ್ನ ಜತೆ ಜಗಳವಾಡಿದವರು ಗೂಳಿಹಟ್ಟಿ ಶೇಖರ್. ಟೀವಿಯಲ್ಲಿ ನಾನು ಶರ್ಟ್ ತೆಗೆದದ್ದು ನೋಡಿದ ಸಲ್ಮಾನ್ ಖಾನ್ ಅವರು ನನ್ನನ್ನು ದಬಾಂಗ್-೩ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಾರೆ. ಹೇಗೂ ನಮಗೆ ಮುಂದಿನ ಚುನಾವಣೆಯ ವಿಚಾರ ಇಲ್ಲ. ನಾನು ಬಾಂಬೆಗೆ ಹೋಗೋಕಿಂತ ಮುಂಚೆ ಬನ್ನಿ ಇಂಟರ್‌ವ್ಯೂ ಮಾಡಿ, ಅಂದರು. ಆ ಪರಮ ದಯಾಳುವಾದ ಕರುಣಾಮಯ ಭಗವಂತನ ದಯೆ ಇದ್ದರೆ ಅದೂ ಆದೀತು ಎಂದುಕೊಂಡೆ.
Print Close

Comments