Spoof on BJP government in Karnataka-1

ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ
By ಹೃಷಿಕೇಶ್ ಬಹದ್ದೂರ್ ದೇಸಾಯಿ

ಅಂದು ಮಧ್ಯಾಹ್ನ ನನ್ನ ಫೋನಿಗೆ ವಿದೇಶಿ ನಂಬರಿನಿಂದ ಫೋನ್ ಬಂತು. ಲಂಡನ್ನಿನಲ್ಲಿರುವ ನನ್ನ ಹೆಂಡತಿಯ ತಮ್ಮ ಫೋನ್ ಮಾಡಿರಬೇಕು ಅಂತ ಎತ್ತಿದೆ. ಆದರೆ ಫೋನ್ ಮಾಡಿದವರು ಬೇರೆ. ಸಹಕಾರಿ ಧುರೀಣ ಹಾಗೂ ಹಿರಿಯ ಮಿತ್ರ ಗುರುನಾಥ್ ಈಜಿಪ್ತ್ ನಿಂದ ಮಾತಾಡುತ್ತಿದ್ದರು.

ಪಿರಾಮಿಡ್ಡೀಕರಣ
``ಏನ್ ನ್ಯೂಸು ಸರ್ ನಮ್ಮ ಪಾರ್ಟಿ ಏನಂತದ? ಸರಕಾರ ಇರ್ತದೋ ಇಲ್ಲೋ?'' ಎಂದರು.
``ನೀವು ಈಜಿಪ್ತ್ ನಲ್ಲಿ ಇದ್ದೀರೋ ಇಲ್ಲೋ. ಅಲ್ಲಿಯೇ ಯಾವುದಾದರೂ ಪಿರಾಮಿಡ್ ನೋಡಲಿಕ್ಕೆ ಹೋದಾಗ ಯಾವುದಾದರೂ ಪಿರಾಮಿಡ್ ಖಾಲಿ ಇದ್ದರೆ ನಿಮ್ಮ ಪಕ್ಷಕ್ಕೊಂದು ಸಮಾಧಿ ಬುಕ್ ಮಾಡಿಬಂದು ಬಿಡ್ರಿ'' ಅಂತಂದೆ.
``ಹೌದು ಹೋಗಿದ್ವಿ. ಆದರೆ ಪಿರಾಮಿಡ್ ಯಾವುದೂ ಖಾಲಿ ಇದ್ದಂಗ ಕಾಣಲಿಲ್ಲ'' ಅಂದರು. ``ಅಯ್ಯೋ ಹಂಗಾರ ಅಯೋಧ್ಯಾನೋ, ಕಾಶ್ಮೀರಾನೋ ಎಲ್ಲೋ ಒಂದು ಕಡೆ ಸಮಾಧಿ ಹುಡುಕಬೇಕಾತು'' ಅಂತ ನಕ್ಕು ಸುಮ್ಮನಾದೆವು.

ಪ್ಲ್ಯಾಂಟರ್ ಗಳ ಸಮಾವೇಶ
ಆ ನಂತರ ಸ್ವಲ್ಪ ಹೊತ್ತಿಗೆ ಸ್ನೇಹಿತ ಶ್ರೀರಾಮುಲು ಅವರ ಪಿಎ ಅವರ ಫೋನ್ ಬಂತು. ಸಾಹೇಬರ ಪ್ರೆಸ್ ಮೀಟ್ ಇದೆ ಸಾರ್, ಬರಬೇಕಂತೆ ಅಂದರು. ನಾನು ಹೋದರೆ ಅಲ್ಲಿ ಪತ್ರಿಕಾಗೋಷ್ಠಿ ಇಲ್ಲ. ಏನಿಲ್ಲ. ಪ್ರೆಸ್ ಮೀಟ್ ಅಂದರೆ ಸುದ್ದಿಗೋಷ್ಠಿ ಅಲ್ಲ. ಸರ್, ಪ್ರೆಸ್ ನವರನ್ನು ಮೀಟ್ ಮಾಡೋದು, ಅಷ್ಟೇ, ಅಂದರು ಸಚಿವರು. ಅವರನ್ನು ಆವಾಗಾವಾಗ ಮೀಟು ಮಾಡುತ್ತಿದ್ದರೆ ಯಾವಾಗ್ಯಾವಾಗ ಏನೇನು ಸುದ್ದಿ ಮಾಡುತ್ತಿರಬೇಕು, ಅದಾಗದಿದ್ದರೆ ಏನೇನು ಸುದ್ದಿ ಪ್ಲ್ಯಾಂಟು ಮಾಡಬೇಕು ಅಂತ ಗೊತ್ತಾಗುತ್ತದೆ, ಅಂದರು. ಈ ಪ್ಲ್ಯಾಂಟೇಷನ್ ಕೆಲಸಕ್ಕಾಗಿಯೇ ಇವರು ಹಿರಿಯ ಪತ್ರಕರ್ತರನ್ನು ಸಲಹೆಗಾರರನ್ನಾಗಿ ಇಟ್ಟುಕೊಂಡಿರುವುದು. ಇಂಥ ದೊಡ್ಡ ಪ್ರ್ಯಾಂಟರುಗಳಿಗೆ ಇದೆಲ್ಲ ಸಹಜ ಅಂದುಕೊಂಡೆ.

ಸವ್ಯಸಾಚಿಯ ಚೆಸ್
ಒಳಗೆ ಜನಾರ್ಧನ ರೆಡ್ಡಿ ಅವರು ಚೆಸ್ ಬೋರ್ಡ್ ಮುಂದೆ ಧ್ಯಾನಾಸಕ್ತರಾಗಿ ಕೂತಿದ್ದಾರೆ. ಅವರ ಜತೆ ಚೆಸ್ ಆಡುತ್ತಿದ್ದವರು ಎದ್ದು ಹೊರಗೆ ಹೋಗಿದ್ದಾರೋ ಏನೋ? ಅದಕ್ಕೇ ಒಬ್ಬರೇ ಕೂತಿರಬಹುದು ಅಂತ ಅಂದುಕೊಂಡೆ. ನೀವು ಏನು ವಿಚಾರ ಮಾಡುತ್ತಿದ್ದೀರಿ ಅಂತ ಗೊತ್ತಾಯ್ತು. ಇವರು ಒಬ್ಬರೇ ಏನು ಮಾಡಾತ್ತ ಇದ್ದಾರೆ ಅಂದುಕೊಂಡಿರಿ ತಾನೇ ನೀವು? ಅಂದರು ಶ್ರೀರಾಮುಲು.

ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೆ
ನಮ್ಮ ಚೇರ್ಮನ್ನರು ತುಂಬ ಒಳ್ಳೇ ಚೆಸ್ ಪ್ಲೇಯರ್. ಅವರು ಎಷ್ಟು ಒಳ್ಳೆ ಆಟಗಾರರು ಅಂದರೆ ಅವರಿಗೆ ಇನ್ನೊಬ್ಬರ ಜತೆ ಚೆಸ್ ಆಡಲು ಸರಿ ಹೋಗೋದಿಲ್ಲ. ಅವರಿಗೆ ಹೀಗೇ ಸರಿ. ಅದಕ್ಕೇ ಯಾವಾಗಲೂ ಹಿಗೇನೇ ಆಡ್ತಾ ಇರ್ತಾರೆ. ಹೀಗಿದ್ದರೆ ಎರಡೂ ಕಡೆಯಿಂದ ಕಾಯಿಗಳನ್ನು ಇವರೇ ನಡೆಸಬಹುದಲ್ಲವೇ? ಒಮ್ಮೆ ಈ ಕಡೆಯಿಂದ ಮೂವ್ ಮಾಡುವುದು, ಇನ್ನೊಮ್ಮೆ ಆ ಕಡೆಯಿಂದ ಮೂವ್ ಮಾಡುವುದು. ಯಾವ ಟೈಮ್ ನಲ್ಲಿ ಯಾವ ಕಡೆಯಿಂದ ಗೆದೆಯಬಹುದೋ ಅಲ್ಲಿಂದ ಜಯ ಡಿಕ್ಲೇರ್ ಮಾಡುತ್ತಾರೆ. ಹೀಗಾಗೇ ಅವರನ್ನು ಅರ್ಥ ಮಾಡಿಕೊಳ್ಳೋದು ಬೇರೆಯವರಿಗೆ ಕಷ್ಟ. ಅಂದರು. ಇವರು ಮಾತು ಕೇಳಿದ ಮೇಲೆ ಇನ್ನೂ ಕಷ್ಟ ಅನ್ನಿಸಿ ಹೌದೌದು ಅಂತಂದೆ.

ದುಡ್ಡು ಇಂಟು ದುಡ್ಡು ಇಕ್ವಲ್ ಟು ರಾಜತಂತ್ರ
ಯಂಡಮೂರಿ ಅವರ ಒಡನಾಟದಿಂದ ಪ್ರಭಾವಿತರಾದ ನಮ್ಮ ಚೇರ್ಮನ್ನರು ತುಂಬ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ. `ಅಘೋರಿಗಳಿಗಿಂತ ಮುಂದೆ',
`ಮೋಹಿನಿ ಕಾಟ ತೊಲಗಿಸುವುದು ಹೇಗೆ?'
`ಸರಕಾರ: ಪ್ರಾಣ ಪ್ರತಿಷ್ಠಾಪನೆ ಹಾಗು ವಿಸರ್ಜನೆ,'
`ಕೆಂಪು ಮಣ್ಣಿನಲ್ಲಿ ಮಳೆ ಇಲ್ಲದ ಬೆಳೆ'ೆ
ಇವೆಲ್ಲ ಬೆಸ್ಟ್ ಸೆಲ್ಲರ್ ಗಳು. ಅಲ್ಲದೇ
ನೀನೇ ಮಾಡಿನೋಡು ಸೀರಿಸ್ ನಲ್ಲಿ
`ರಾಜ್ಯಗಳ ಗಡಿ ವಿಸ್ತರಿಸುವುದು ಹೇಗೆ?'
`ಶಕುನಿಗೇ ತಿರುಮಂತ್ರ ಮಾಡುವುದು ಹೇಗೆ?'
`ಹಿಮಾಲಯದ ಯೋಗಿಗಳ ತಂತ್ರಗಳನ್ನು ರಣ ರಣ ಬಿಸಿಲಿನಲ್ಲಿ ಬಳಸುವುದು ಹೇಗೆ?'
ಇತ್ಯಾದಿ ಪುಸ್ತಕ ಬರೆದಿದ್ದಾರೆ.

ಈಗ `ಎಲ್ಲಾ ಸಾಧಿಸಿದ ಮೇಲೆ ಯಾವ ಸಾಧನೆ ಮಾಡುವುದು?' ಅನ್ನೋ ಮಹಾ ಕಾದಂಬರಿ ಬರೆಯುತ್ತಿದ್ದಾರೆ. ರಜನಿ ಪಿಕ್ಚರ್ ಥರಾ ಮಾರುಕಟ್ಟೆಗೆ ಬರುವ ಮೊದಲೇ ಮೊದಲ ಪ್ರಿಂಟ್ ಖರ್ಚಾಗಿ ಎರಡನೇ ಪ್ರಿಂಟ್ ಗೆ ಬೇಡಿಕೆ ಬಂದಿದೆ ಅಂದರು. ಅದರ ಪಿಆರ್ ಕೆಲಸ ಎಲ್ಲ ನಮ್ಮಲ್ಲಿ ಕೆಲಸಕ್ಕೆ ಇರುವ ಹಾಲಿ ಹಾಗೂ ಮಾಜಿ ಪರ್ತಕತ್ರರು ನೋಡಿಕೊಳ್ಳುತ್ತಾರೆ ಎಂದರು. ಯೆಸ್ ಯೆಸ್ ಅಂತ ಅಲ್ಲಿ ಕೂತಿದ್ದ ಪೆನ್ನಿಗರಾಯರು ತಲೆ ಆಡಿಸಿದರು.
ಕೊನೆಗೆ ಅವರ ಹೆಲಿಕಾಪ್ಟರ್ ನಲ್ಲಿ ಗೋವಾಕ್ಕೆ ಹೋದೆವು.

ಕೊಳೆಯುವ ಸಿರಿ ಮೊಳಕೆಯಲ್ಲಿ
ಅಲ್ಲಿ ನಮ್ಮ ರೇಣುಕಾಚಾರ್ಯ ಅವರು ಇದ್ದರು. ``ಸ್ವಾಮಿ ನಮ್ಮನ್ನು ಸೀಎಮ್ಮು ಏನು ಅಂದುಕೊಂಡಿದ್ದಾರೆ? ನಾನು ನನಗೆ ಕೊಟ್ಟ ಖಾತೆ ಸರಿಯಾಗಿ ನಡೆಸಿಲ್ಲವೇ? ಹಿಂದಿನ ಅಬಕಾರಿ ಮಂತ್ರಿಗಳೆಲ್ಲ ದೊಡ್ಡವರಿಗೆ ಸರಾಯಿ ಕುಡಿಸಲು ಆಗದೇ ಸೋತು ಹೋಗಿದ್ದಾರೆ. ಆದರೆ ನಾನು ಏಳು ವರ್ಷದ ಹುಡುಗನಿಗೂ ಕೂಡ ಕುಡಿಸಿದ್ದೇನೆ. ಮಾಧ್ಯಮದ ಮಿತ್ರರು ಅದನ್ನು ಟೀವಿಯಲ್ಲಿ, ಪೇಪರ್ ನಲ್ಲಿ ತೋರಿಸಿದ್ದಾರೆ. ಬೇಕಾದರೆ ನೊಡಿ'' ಅಂತ ಪೇಪರ್ ಕಟಿಂಗ್ ಇಟ್ಟುಕೊಂಡಿದ್ದ ಫೈಲ್ ತೋರಿಸಿದರು. ``ನನ್ನಷ್ಟು ಕಷ್ಟ ಪಡೋ ಕಾರ್ಯಕತ್ರನಿಗೆ ಜಯಲಕ್ಷ್ಮಿ ಒಲಿಯಬಾರದೇ'' ಅಂದರು. ನೀವು ಹೇಳುವುದೂ ಸರಿ ಇದೆ ಅಂತ ಹೇಳಿದೆ.

ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ
ಅಷ್ಟೊತ್ತಿಗೆ ಹರಿಹರದ ಹರೀಶ್ ಸಿಕ್ಕರು. ಸೀಎಮ್ಮು ಫೋನ್ ಮಾಡಿದ್ರು ಸಾ, ನಮ್ಮ ಎಮ್ಮೆಲ್ಲೆ ಗಳು ಚೆನ್ನೈ ರಿಸಾರ್ಟಿಗೆ ಹೋಗಿದ್ದಾರೆ. ಅವರು ಒಳಗೊಳಗೇ ಏನು ಮಾತಾಡ್ತಾರೆ ಅಂತ ತಿಳಿದುಕೊಳ್ಳೋಕೆ ನೀವು ಹೋಗಬೇಕು ಅಂತ ಹೇಳಿದರು. ಅದಕ್ಕೇ ಇಲ್ಲಿ ಇದ್ದೀನಿ ಅಂದರು. ಹಾಗಾದರೆ ಗೂಢಚಾರನ ಕೆಲಸ ಅನ್ನಿ, ನಿಮ್ಮಂಥ ಗೂಢಚಾರರು ಇಲ್ಲಿ ಎಷ್ಟು ಜನ ಇದ್ದೀರಿ ಅಂತ ಮೆಲುದನಿಯಲ್ಲಿ ಕೇಳಿದೆ. ಅಯ್ಯೋ ಅದಕ್ಕೇಕೆ ಅಷ್ಟೊಂದು ಹಿಂಜರಿದುಕೊಂಡು ಮಾತಾಡ್ತೀರಾ? ಇಲ್ಲಿ ಇರೋರೆಲ್ಲಾ ಗೂಢಚಾರರೇ. ಯಾರ ಕಡೆ ಗೂಢಚಾರರು ಅನ್ನೋದು ಮಾತ್ರ ವಿಶ್ವಾಸ ಮತದ ನಂತರ ತೀರ್ಮಾನವಾಗುತ್ತೆ. ಅಲ್ಲಿವರೆಗೂ ನಾವು ನಿಮ್ಮವರವಲ್ಲ. ನೀವು ನಮ್ಮವರಲ್ಲ. ನಮ್ಮ ಕೆಲಸ ಏನು ಅಂದರೆ ಭಿನ್ನಮತೀಯರಲ್ಲಿ ಭಿನ್ನಮತ ಮೂಡಿಸುವುದು, ಹೀಗೆ ನಮ್ಮ ಕಡೆ ಬಂದವರ ಮೇಲೆ ನಿಗಾ ಇಡಲು ಗೂಢಚಾರರನ್ನು ನೇಮಿಸುವುದು. ಆಮೇಲೆ ಅವರು ಸರಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಅಂತ ನೋಡಲು ಅವರ ಮೇಲೆ ಮತ್ತೊಬ್ಬ ಗೂಢಚಾರರನ್ನು ನೇಮಿಸುವುದು. ಇದೆಲ್ಲಾ ನಡೀತಾ ಇದೆ. ನೇಮಕದ ವಿಷಯದಲ್ಲಿ ಪರಿಣಿತರಾಗಿರುವ ರಾಮಚಂದ್ರಗೌಡರೇ ಇದಕ್ಕೆಲ್ಲಾ ಇನ್ ಚಾರ್ಜು. ಆದರೆ ಇದ್ಯಾವುದೂ ಕ್ಲಿಯರ್ ಇಲ್ಲ. ಇದೊಂಥರಾ ಯಂಡಮೂರಿ ಕಾದಂಬರಿ ಲೆಕ್ಕ ಅಂದರು. ಇದರ ಬಗ್ಗೆ ಯಾರಾದರೂ ಕಾದಂಬರಿ ಬರೆಯುತ್ತಿದ್ದಾರಾ ಎಂದು ಕೇಳಿದೆ. ಇರಬಹುದು. ಕೆಲವು ದಿನ ಕಾದು ನೋಡಿ ಅಂದರು.

ಸ್ಟ್ಯಾಂಪಿಟ್
``ನಮಗ ಯಾರೂ ರೊಕ್ಕಾ ಕೊಟ್ಟಿಲ್ಲರೀ. ನಾವ ಎಲ್ಲರಿಗೂ ಕೊಡೋದು. ನಮಗ ರೊಕ್ಕಾ ಕೊಡಲಿಕ್ಕೆ ಬರುವ ಗಂಡಸು ಮಗ ಯಾವಾ ಅದಾನರೀ,'' ಅಂದರು ಜಾರ್ಕಿಹೊಳಿ. ಅವರು ಕೊಟ್ಟಿದ್ದು ಏನಿದ್ರೂ ಅಲ್ಲಿ ಗ್ಯಾರೇಜಿನಲ್ಲಿ ಅದಾವು ನೋಡ್ರಿ ಅಂದರು. ಅಲ್ಲಿ ಕೆಲವು ಸಾರಾಯಿ ಪ್ಯಾಕ್ ಮಾಡೋ ಪ್ಲಾಸ್ಟಿಕ್ ಚೀಲ ಇದ್ದವು. ಅದರಲ್ಲಿ ಹಸಿರು, ಕೇಸರಿ ಮತ್ತು ಬಿಳಿ ಸ್ಟ್ಯಾಂಪ್ ಗಳನ್ನು ಅಂಟಿಸಿದ ಚೀಲಗಳಿದ್ದವು. ``ಅವು ಬೇರೆ ಬೇರೆ ಪಾರ್ಟಿಯವರು ಕೊಟ್ಟಿದ್ದು. ಸ್ವಲ್ಪ ದಿನಾ ನೋಡ್ತೇವಿ. ಆಮ್ಯಾಲೆ ಯಾವ ಸರಕಾರ ಬರ್ತದೋ ಆ ಸರಕಾರದ ಸ್ಟೀಕರನ್ನೇ ಎಲ್ಲಾದಕ್ಕೂ ಹಚ್ಚಿ ಇಟ್ಟುಕೊಂಡು ಬಿಡ್ತೇವಿ,'' ಅಂದರು.

ಗಾಂಧಿಗೂ ಟೊಪ್ಪಿಗೆಗೂ ಏನು ಸಂಬಂಧ?
ಬೆಳ್ಳುಬ್ಬಿ ಅವರು ಅಂಬರ ಚರಕಾ ಇಟ್ಟುಕೊಂಡು ಕೂತಿದ್ದರು. ತಮ್ಮ ತಲೆಯ ಮೇಲಿನ ಗಾಂಧಿ ಟೊಪ್ಪಿಗೆ ತೆಗೆದು ಗಾಂಧೀಜಿ ಫೋಟೋಗೆ ಹಾಕಿದ್ದರು.
ಅಲ್ಲರೀ ಈ ಗಾಂಧಿ ಅಜ್ಜ ತಾನು ಜೀವನದಾಗ ಟೊಪಿಗೆ ಹಾಕ್ಕೋಳಿಲ್ಲ. ನಮ್ಮಂಥವರಿಗೆ ಹಾಕಿ ಹೋದ. ಅದನ್ನು ಹಾಕಿಕೊಂಡಾಗ ಎಷ್ಟು ಕಷ್ಟ ಇರತದ ಅಂತ ಗೊತ್ತಾಗಲಿ ಅಂತ ಆ ಫೋಟೋಕ್ಕ ಹಾಕೇವಿ ಅಂದರು. ಅದೂ ಸರಿ ಇರಬಹುದು ಅನ್ನಿಸಿತು.

``ಸುಮ್ಮನೇ ಖಾಲಿ ಕೂತು ಏನು ಮಾಡೋದ್ರಿ, ಖಾದಿ ನೂಲು ತೆಗೆಯೋಣು ಅಂತ ಕೂತೇನಿ'' ಅಂತ ಚರಕಾದ ಮೇಲೆ ಕೈಯಾಡಿಸಿದರು.

ನೂತಿದ್ದುಟ್ಟು ಕೊಳ್ಳೋ ಮಾರಾಯ
``ಅಲ್ಲರೀ ಖಾದಿ ನೂಲಾದರ ಮನ್ಯಾಗೆ ತೆಗೀಬಹುದು. ಆದರೆ ಕೆಂಪು ಗೂಟದ ಕಾರು ನಮ್ಮ ಮನೀ ಗ್ಯಾರೇಜಿನ್ಯಾಗ ಮಾಡಿದರ ಮಂದಿ ನಗತಾರ ನೋಡ್ರಿ. ಮಿನಿಸ್ಟರ ಲೆಟರ್ ಹೆಡ್ಡೂ, ವಿಧಾನಸೌಧದ ಚೇಂಬರು, ಗನ್ ಮೆನ್ನೂ, ಪ್ರೊಟೊಕಾಲ್ ವೆಹಿಕಲ್ಲೂ ಇವೆಲ್ಲ ಹೊರಗಿನಿಂದ ತರೋ ಸಾಮಾನು ನೋಡ್ರಿ. ಅದಕ್ಕ ಚೆನ್ನೈಗೆ ಹೊದಿವಿ. ಅಲ್ಲಿ ಹವಾ ಸರಿ ಇಲ್ಲ ಅಂತ ಇಲ್ಲಿಗೆ ಬಂದೇವಿ'' ಅಂದರು.

ತಿಂದು ಹೆಚ್ಚಾದವರ ಪುನರ್ವಸತಿ
ಕೊನೆಗೆ ಸುಧಾಕರ್ ಅವರು ಸಿಕ್ಕರು. ಅಲ್ಲಾ ಸ್ವಾಮಿ, ಇದೆಲ್ಲ ಈಗ ಮಾಡುತ್ತಿದ್ದಾರೆ. ಸುಮ್ಮನೇ ರಿಸಾರ್ಟ್ ಖರ್ಚು. ಕೆಲವು ತಿಂಗಳು ಹಿಂದಾಗಿದ್ದರೆ ಮಾಗಡಿ ರೋಡ್ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿಯೇ ನಮ್ಮ ಎಮ್ಮೆಲ್ಲೇಗಳು ಇರಬಹುದಿತ್ತು. ಅದೆಲ್ಲಾ ನಮ್ಮ ಕೈಯಲ್ಲೇ ಇತ್ತು. ಊಟ, ವಸತಿ ಎಲ್ಲಾ ಫ್ರೀ. ಯಾರೂ ಹೊರಗೆ ಹೋಗಲಿಕ್ಕೆ ಸಾಧ್ಯ ಇರಲಿಲ್ಲ. ನಮ್ಮವರನ್ನು ಭೇಟಿಯಾಗಲಿಕ್ಕೆ ಯಾವುದೇ ಪಾರ್ಟಿಯವರು ಬರಬಹುದಿತ್ತು. ಯಾರಾದರೂ ಧುರೀಣರು ಬಂದು ನಮಗೆ ಏನಾದರೂ ಕೊಟ್ಟರೂ ಕೂಡ ಇಸಗೊಂಡು ಸುಮ್ಮನೇ ಇರಬಹುದಾಗಿತ್ತು. ಯಾರಾದರೂ ತಕರಾರು ಮಾಡಿದರೆ, ಅದು ಹೇಳಿ ಕೇಳಿ ಭಿಕ್ಷುಕರ ಕೇಂದ್ರ ಅಪ್ಪಾ ಸುಮ್ಮನೇ ಇರಿ ಅಂತ ತಿಳಿಹೇಳಬಹುದಿತ್ತು. ಏನಾಗ್ತಿತ್ತು? ಬಹಳ ಅಂದರೆ ಒಂದೆರೆಡು ಜನ ಸಾಯಬಹುದಿತ್ತು. ಅವರು ಹಸಿವಿನಿಂದ ಸತ್ತಿಲ್ಲ. ಊಟ ಹೆಚ್ಚಾಗಿ ಸತ್ತರು ಅಂತ ಸರಕಾರಿ ಡಾಕ್ಟರಿಂದ ಸರ್ಟಿಫಿಕೆಟ್ ಕೊಡಿಸಿ ಸುಮ್ಮನಾಗಬಹುದಿತ್ತು. ಅಂದರು. ಅವರು ಹೇಳುವುದರಲ್ಲೇನೂ ತಪ್ಪಿಲ್ಲ ಅನ್ನಿಸಿ ಸುಮ್ಮನಾದೆ.

ಎಲ್ಲರಿಗೂ ಸೇರಿದ ಸಂಪತ್ತು
ಗೂಳಿಹಟ್ಟಿ ಅವರು ನಮ್ಮ ಸಿಟ್ಟು ಏನಿದ್ದರೂ ಆ ಕಲ್ಮಾಡಿ ಮೇಲೆ ನೋಡಿ. ನಾನು ಮಿನಿಸ್ಟರಾಗಿ ಕಂಟಿನ್ಯೂ ಆಗಿದ್ದರೆ ಕಾಮನ್ ವೆಲ್ತ್ ಗೇಮ್ಸ್ ನೋಡಲಿಕ್ಕೆ ಸರಕಾರಿ ಗೌರವದಿಂದ ಹೋಗುತ್ತಿದ್ದೆನೆ? ನನಗೆ ಆ ಭಾಗ್ಯ ತಪ್ಪಲಿ ಅಂತ ಅವರು ಯಡ್ಯೂರಪ್ಪ ಅವರ ಕಿವಿ ಕಚ್ಚಿ ನನ್ನ ಸಚಿವ ಸ್ಥಾನ ತಪ್ಪಿಸಿದರು. ಅವರ ಮಾತು ಕೇಳಿ ಯಡ್ಡಿ ಅವರು ನನ್ನನ್ನು ರಿಂಗಿನಿಂದ ಎತ್ತಿ ಹೊರಗೆ ಒಗೆದರು.

ಅಲ್ಲಾ ಇವರೆಲ್ಲ ನಾಯಕರಾಗಬಾರದು. ಕಲ್ಮಾಡಿ ಅವರು ಗುರಿಕಾರಾಗಬೇಕು. ಯಡ್ಡಿ ಅವರು ಕುಸ್ತಿಪಟು ಆಗಬೇಕು. ಬಂಗಾರದ ಪದಕಗಳ ಸುರಿಮಳೆ ಗ್ಯಾರಂಟಿ ನೋಡಿ. ಅಂದರು.

ಕದ್ದ ಮಾವಿನಕಾಯೇ ರುಚಿ
ಕೆಲವೇ ಕ್ಷಣಗಳಲ್ಲಿ ಅಲ್ಲಿಯ ವಾತಾವರಣವೇ ಬದಲಾಯಿತು. ಮಾವಿನಕಾಯಿ ಕದಿಯಲು ಹೋದ ಹುಡುಗರ ಗುಂಪು ತೋಟದ ಕಾವಲುಗಾರ ಬಂದಾಗ ಓಡಿ ಹೋದಂತೆ ಎಲ್ಲ ಎಮ್ಮೆಲ್ಲೆಗಳು ಓಡಿ ರಿಸಾರ್ಟಿನ ಹಿತ್ತಲಿನಲ್ಲಿದ್ದ ಸಮುದ್ರ ದಂಡೆಯ ಕಡೆ ಓಡಿದರು.

ಯಾಕೆ ಅಂತ ನೋಡಿದರೆ ಮುಂಬಾಗಿಲಿನಲ್ಲಿ ನಿಂತ ಡಾ.ಅಶೋಕ್ ಕಂಡರು. ಅವರು ಮುಂಚೆ ಎಲ್ಲಾ ಬಸ್ಸು ಓಡಿಸುವುದು, ರಿಯಲ್ ಎಸ್ಟೇಟು ವ್ಯವಹಾರ ಮುಂತಾದ ಕೆಲಸ ಮಾಡುತ್ತಿದ್ದರಂತೆ. ಆದರೆ ಈಗೀಗ ಆಪರೇಷನ್ ಮಾಡಬೇಕಾಗುತ್ತದೆ ಅಂತ ಮೆಡಿಕಲ್ ಕಾಲೇಜು ಸೇರಿಕೊಂಡಿದ್ದರಂತೆ. ಅವರನ್ನು ನೋಡಿಯೇ ಎಮ್ಮೆಲ್ಲೆಗಳು ಓಡಿ ಹೋದರೆ, ಅವರೇನಾದರೂ ಬಂದು ಇವರ ಕೈಹಿಡಿದರೆ ಏನಾಗಬಹುದು ಅಂತ ಅನ್ನಿಸಿತು.

ಪಿಎಚ್ಡಿ ಇನ್ ಬ್ಲಡ್ ಲೆಸ್ ಸರ್ಜರಿ
ಅಯ್ಯೋ ಆವಾಗ ಆರ್ಎಂಪಿ ಡಾಕ್ಟರೆಲ್ಲ ಆಪರೇಷನ್ ಮಾಡ್ತಿದ್ರಿ. ಈಗ ಡಬಲ್ ಡಿಗ್ರಿ ಬೇಕಾಗೈತೆ. ಪೇಷಂಟೇ ಸಿಗಕ್ಕಿಲ್ಲ. ಸಿಕ್ಕರೂ ಪೋಸ್ಟ್ ಆಪರೇಟಿವ್ ಎಕ್ಸ್ ಪೆನ್ಸಸ್ ಅಂತ ಸಿಕ್ಕಾಪಟ್ಟೆ ಹಣ ಕೇಳ್ತಾರೆ. ನಾವು ಎಲ್ಲಕ್ಕೂ ವ್ಯವಸ್ಥೆ ಮಾಡಿದಿರಿ.

ಮೊದಮೊದಲು ನಮಗೂ ಕಲಿಯಕ್ಕೆ ತುಂಬ ಕಷ್ಟ ಆಯಿತು. ಆದರೆ ಮಾಡಿ ಮಾಡಿ ಕಲಿತು ಬಿಟ್ಟಿದ್ದೀರಿ. ನಮ್ಮ ಸರ್ಜರಿ ತುಂಬಾ ಇಂಟರೆಸ್ಟಿಂಗ್. ಮೇಜರ್ ಆಪರೇಷನ್ ಆದರೂ ನೋವಾಗೋದಿಲ್ಲ, ರಕ್ತ ಬರೋದಿಲ್ಲ.
ಸುಮ್ಮನೇ ನೋಡಿ ಯಾವ್ಯಾವ ಪೇಷಂಟ್ ಸಿಕ್ತಾರೆ, ಹೆಂಗೆಂಗೆ ರಿಪೇರಿ ಆಗ್ತಾರೆ ಅಂತ ನೋಡ್ತಾ ಇರಿ ಅಂದರು. ಅವರು ಗ್ಲೌಸು ಹಾಕಿಕೊಳ್ಳುವವರೆಗೆ ನಾನು ಪಕ್ಕಕ್ಕೆ ಸರಿದು ನಿಂತೆ.

(ಮುಗಿಯಿತು)

Print Close

Comments

Popular posts from this blog

``All Muslims are not Terrorists, But all Terrorists are Muslims''

Black Buck resort in Bidar by Jungle Lodges and Resorts

Integrated farming