Democracy for Dummies-2

ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ


ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ
By ಹೃಷಿಕೇಶ್ ಬಹದ್ದೂರ್ ದೇಸಾಯಿ

ರಾಜ್ಯದ ೩೦ ಪಂಚಾಯಿತಿಗಳಲ್ಲಿ ಬಿಜೆಪಿ ೧೨ ಸ್ಥಾನ ಗೆದ್ದಿತು, ಕಾಂಗ್ರೆಸ್, ಜೆಡಿಎಸ್ ನಾಲ್ಕು ನಾಲ್ಕು ಗೆದ್ದವು, ಇನ್ನುಳಿದ ೧0 ಅತಂತ್ರ ಅಂತ ಕೆಲವರು ಮೊನ್ನೆ ಸುದ್ದಿ ಬರೆದಿದ್ದಾರೆ. ನಿನ್ನೆಯಿಂದ ಅನೇಕರು ಓದುತ್ತಲೇ ಇದ್ದಾರೆ. ಎಲ್ಲಾ ಕಡೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಂದು ಪಂಚಾಯಿತಿ ಸಭೆಗಳು ಆರಂಭವಾಗುವವರೆಗೆ ಇಂಥ ಸುದ್ದಿ ಓದಲೇಬೇಕಾದ ಅನಿವಾರ್ಯತೆ ಮತದಾರರೆಂಬ ನಿತ್ಯ ನಾರಕಿಗಳಿಗೆ ಇದೆ.

ಹಂಗೆಲ್ಲಾ ಅಂದರೇನು? ಇದರ ಅರ್ಥ ಏನು? ಈ ಜನವರಿ ೪ ನಾಲ್ಕರ ಚುನಾವಣೆ ಫಲಿತಾಂಶದ ಹಕೀಕತ್ತಾದರೂ ಏನು? ಇದು ಬೇಕಿತ್ತೇ?

ನಿಮ್ಮೊಡನಿದ್ದೂ ನಿಮ್ಮಂತಿರದ ಬಾಳು
“ಇದರ ಸೀದಾ ಸಾದಾ ಅರ್ಥ ಏನೆಂದರೆ, ರಾಜ್ಯದ ಜಿಲ್ಲಾ ಪಂಚಾಯಿತಿಗಳ ಪೈಕಿ ೪೦ ಶೇಕಡಾ ಸಂಸ್ಥೆಗಳಲ್ಲಿ ಬಹುಮತ ಪಡೆದ ಬಿಜೆಪಿ ಹಾಗೂ ಅದರ ಕಮಾಂಡರ್ ಆದ ಯಡಿಯೂರಪ್ಪ ಅವರು ಗೆದ್ದಂತೆ” ಅಂತ ಮುಖ್ಯಮಂತ್ರಿಗಳ ರೇಸ್ ಕೋಸ್ ನಿವಾಸದ ಸುತ್ತಮುತ್ತ ತಿರುಗಾಡುತ್ತಿರುವ ಅವರ ಹಿಂಬಾಲಕರು ಹೇಳುತ್ತಿದ್ದಾರಂತೆ. ಹೇಳಿಕೊಂಡು ಮತ್ತೆ ತಿರುಗಾಡುತ್ತಿದ್ದಾರಂತೆ.

ಅಡ್ಡ ವೈಸರ್ ಗಳು
ಇನ್ನು ಕೆಲವರು “ಇದಕ್ಕೆ ಸಾಧನೆ ಅಂತಾರೆಯೇ? ಇದು ಕಂಪ್ಲೀಟ್ ಫೇಲ್ಯುರ್. ನಾನು ಮುಖ್ಯಮಂತ್ರಿಯಾಗಿದ್ದರೆ ತೋರಿಸುತ್ತಿದ್ದೆ. ನೂರಕ್ಕೆ ನೂರು ಕಡೆ ನಮ್ಮವರು ಬಂದು ವಿರೋಧ ಪಕ್ಷ ನಿರ್ನಾಮ ಮಾಡುತ್ತಿದ್ದೆ !@#$,” ಅಂತ ಹೇಳುತ್ತಿದ್ದಾರಂತೆ. ಇಂಥ ಕುಹಕಿಗಳಲ್ಲಿ ‘ಅವರೊಡನಿದ್ದೂ ಅವರೊಡನಿರದಿರುವ ಕೆಲವರು’ ಇದ್ದಾರೆ ಅಂತ ಮುಖ್ಯಮಂತ್ರಿಗಳ ಅಡ್ಡ ಅಡ್ಡ ಅಡ್ವೈಸರ್ ಗಳು ಅವರ ಮಾರ್ನಿಂಗ್ ವಾಕ್ ನಲ್ಲಿ ಹೇಳುತ್ತಿದ್ದಾರಂತೆ.

ಹಾಗಾದರೆ ಪಂಚಾಯಿತಿ ಚುನಾವಣೆಗಳಲ್ಲಿ ಏನಾಯ್ತು?
ರಾಜ್ಯದ ಜನ ಬಿಜೆಪಿ ಸರಕಾರ ದ ಹಗರಣಗಳನ್ನು, ಮುಖ್ಯಮಂತ್ರಿಗಳೂ ಸೇರಿದಂತೆ ಮಂತ್ರಿಗಳ ವಿರುದ್ಧದ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ, ವೈಯಕ್ತಿಕ ದುರ್ನಡತೆಯ ಆರೋಪಗಳೆಲ್ಲವನ್ನೂ ಮರೆತರೆ? ಎಲ್ಲಕ್ಕಿಂತ ಮುಖ್ಯವಾಗಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡಕರಿ ಅವರೇ ‘ಅನೈತಿಕ’ ಎಂದು ಒಪ್ಪಿಕೊಂಡ ಡಿನೋಟಿಫಿಕೇಷನ್ನುಗಳನ್ನು ಕ್ಷಮಿಸಿದರೇ?

ಅಥವಾ “ಈ ಎರಡೂವರೆ ವರ್ಷದಲ್ಲಿ ನೀವು ಮಾಡಿದ್ದೆಲ್ಲವನ್ನೂ ನಾವು ಒಪ್ಪಿಕೊಂಡಿಲ್ಲ. ಇದು ಮೊದಲ ಎಚ್ಚರಿಕೆ. ನಿಮ್ಮನ್ನು ನೀವು ತಿದ್ದಿಕೊಳ್ಳಲು ನಿಮಗೆ ಒಂದು ಅವಕಾಶ ಕೊಟ್ಟಿದ್ದೇವೆ. ಇದೇ ಲಾಸ್ಟ್. ಇನ್ನು ಮುಂದೆ ನೀವು ತಿದ್ದಿಕೊಳ್ಳದಿದ್ದರೆ ಇನ್ನು ಎರಡೂವರೆ ವರ್ಷದ ನಂತರ ನಿಮಗೆ ತಿದ್ದಿಕೊಳ್ಳಲು ಅವಕಾಶ ಸಿಗುವುದಿಲ್ಲ. ಆಗ ನಾವೆಲ್ಲ ಸೇರಿ ಹೊಸ ತಪ್ಪು ಮಾಡಲು ಬೇರೆ ಪಕ್ಷಕ್ಕೆ ಅವಕಾಶ ಕೊಡುತ್ತೇವೆ” ಎಂದು ಹಳ್ಳಿ ಜನರೆಲ್ಲ ಸೇರಿ ಸರಕಾರಕ್ಕೆ ಧಮಕಿ ಕೊಟ್ಟಿದ್ದಾರೆಯೇ?

ಇವರೆಡೂ ಅಲ್ಲ.

ಸರಕಾರದ ತಪ್ಪು ಒಪ್ಪುಗಳನ್ನು ಜನ ಮರೆತಿಲ್ಲ, ಕ್ಷಮಿಸಿಲ್ಲ. ರಾಜ್ಯದ ಆಡಳಿತವೇ ಬೇರೆ, ಪಂಚಾಯಿತಿ ಚುನಾವಣೆಯೇ ಬೇರೆ. ಇದೇ ಪ್ರಜಾಪ್ರಭುತ್ವದ ಮಜಾ.

ಚಹಾ ಅಂಗಡಿಯ ಮೆನುನಲ್ಲಿ ಏನಿದೆ?
ಪಂಚಾಯಿತಿ ಚುನಾವಣೆಗಳಲ್ಲಿ ಇಂಥ ದೊಡ್ಡ ದೊಡ್ಡ ವಿಷಯಗಳೆಲ್ಲ್ಲ ಚರ್ಚೆಯ ವಿಷಯಗಳೇ ಅಲ್ಲ. ಬೇರುಮಟ್ಟದ ರಾಜಕೀಯದಲ್ಲಿ ಅಪಾರ ಅನುಭವ ಇರುವ ಯಡಿಯೂರಪ್ಪ ಅವರಿಗೆ ಇದು ಚೆನ್ನಾಗಿ ಗೊತ್ತು.

ಅದಕ್ಕೇ ಅವರು ‘ನಾನು ತಪ್ಪು ಮಾಡಿದ್ದರೆ ಪಂಚಾಯಿತಿ ಚುನಾವಣೆಗಳಲ್ಲಿ ಜನ ತೀರ್ಪು ಕೊಡುತ್ತಾರೆ’ ಅಂತ ಹೇಳಿದ್ದು. ರಾಜ್ಯ ಮಟ್ಟದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳು ಪಂಚಾಯಿತಿ ಚುನಾವಣೆಗೆ ಮುಂಚೆ ಊರ ಮುಂದಿನ ಚಹಾ ಅಂಗಡಿಯಲ್ಲಿ ಚರ್ಚೆಗೆ ಬರುವುದೇ ಇಲ್ಲ, ಮತದಾರನ ಆಯ್ಕೆಯನ್ನು ಅವು ನಿರ್ಧರಿಸುವುದಿಲ್ಲ. ಚುನಾವಣೆ ಸಮಯದಲ್ಲಿ ಸುಮ್ಮನೇ ಹಳ್ಳಿಗಳ ಕಡೆ ಪಿಕ್ ನಿಕ್ ಗೆ ಹೋದವರಿಗೇ ಇದು ಗೊತ್ತಾಗುವಾಗ ರಾಜಕೀಯವನ್ನೇ ಉಂಡು ತಿಂದು ಉಸಿರಾಡುವ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲವೇ?

ಕಪ್ಪು ಬಿಳುಪಿನ ಪೋಸ್ಟ್ ಮಾರ್ಟಮ್
ಈ ಗಹನವಾದ ವಿಚಾರವನ್ನು ತಿಳಿಯುವ ಮುನ್ನ ಒಂದು ಕತೆ ಕೇಳೋಣ. ಮೊನ್ನೆಯ ಚುನಾವಣೆ ಪ್ರಚಾರ ನೋಡಲು ನಾವು ಹೋದಾಗ ಹಿಂದೆ ಎರಡು ಸಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಗೆದ್ದು, ಗ್ರಾಮೀಣ ಜನರ, ಹಿಂದುಳಿದವರ ನಾಯಕ ಅಂತ ಅನ್ನಿಸಿಕೊಂಡ ಅಮೃತ್ ಚಿಮ್ಕೋಡ್ ಅವರು ಸಿಕ್ಕರು. ಅವರು ಅವರ ಮನೆಯವರ ಪರವಾಗಿ ಪ್ರಚಾರ ನಡೆಸಿದ್ದರು. ಹಳ್ಳಿಯ ಮುದುಕಿಯೊಬ್ಬಳು ಅವರನ್ನು “ಅಯ್ಯೋ ನೀನೆಷ್ಟು ಕರ್ರಗಿದ್ದೀ, ನಿಮ್ಮ ಮೇಡಂ ಅವರು ಎಷ್ಟು ಬೆಳ್ಳಗಿದ್ದಾರೆ” ಅಂದಳು. “ಅಯ್ಯೋ ಏನು ಮಾಡೋದು ಎವ್ವಾ, ರಾಧಾ ಕ್ಯೋಂ ಗೋರಿ, ಮೈ ಕ್ಯೋಂ ಕಾಲಾ?” ಅಂತ ನಕ್ಕರು. ಆ ಮನೆಯಲ್ಲಿದ್ದ ಎಲ್ಲರನ್ನೂ ನಗಿಸಿದರು. (ರಾಧಾ ಯಾಕೆ ಬೆಳ್ಳಗಿದ್ದಾಳೆ ನಾನೇಕೆ ಕಪ್ಪು ಎನ್ನುವುದೊಂದು ಮೀರಾ ಭಜನೆ). ನಂತರ ಅಮೃತ್ ಈಚೆಗೆ ಬಂದು ನಕ್ಕರು. “ನಮ್ಮ ಸಾಹೇಬರು ನಾಮಿನೇಷನ್ ಹಾಕಿದಾಗಲೇ ಗೆದ್ದು ಬಿಟ್ಟರು” ಅಂತ ಅವರ ಹಿಂಬಾಲಕರೊಬ್ಬರು ಹೇಳಿದರು. ಸಾಹೇಬರ ಹೆಂಡತಿ ನಾಮಿನೇಷನ್ ಹಾಕಿದ್ದರೂ ಕೂಡ ಸಾಹೇಬರು ಹಾಕಿದಂತೆ ಅಂತ ಅವರು ಮಾತಾಡುತ್ತಾರೆ.

ಕುಯ್ಯುವ, ಹೊಲಿಯುವ ಕಾಂಟ್ರ್ಯಾಕ್ಟ್
ನೀವು ಈ ಜನರಿಗೆ ಏನು ಮಾಡಿದ್ದೀರಿ ಅಂತ ನಾವು ಕೇಳಿದಾಗ ಅವರು ಹೇಳಲು ಶುರು ಮಾಡಿದರು. “ಸಾರ್ ನಾನು ನನ್ನ ಕ್ಷೇತ್ರದ ಪೋಸ್ಟ ಮಾರ್ಟಮ್ ಗಳಿಗೆ ಗುತ್ತಿಗೆದಾರ. ಅದರಲ್ಲೂ ಕ್ಲಾಸ್ ಒನ್ ಕಾಂಟ್ರಾಕ್ಟರ್. ಈ ಹಳ್ಳಿಗಳಲ್ಲಿ ಯಾರಿಗಾದರೂ ಆರಾಮ ಇಲ್ಲದೇ ಜಿಲ್ಲಾಸ್ಪತ್ರೆಗೆ ಹೋಗಿ ಸತ್ತರೆ, ಅಲ್ಲಿ ಅವರಿಗೆ ಪೋಸ್ಟ ಮಾರ್ಟಮ್ ಮಾಡಬೇಕು. ಅದನ್ನು ಮಾಡಲು ಡೆಡ್ ಬಾಡಿಯನ್ನು ಹೆಣದ ಮನೆಗೆ ಒಯ್ಯಬೇಕು. ಅಲ್ಲಿಗೆ ಒಯ್ಯುವವರಿಗೆ ಲಂಚ ಕೊಡಬೇಕು. ನಂತರ ಅದನ್ನು ಕೊಯ್ಯುವವರು, ಹೊಲಿಯುವವರು ಸಿಗಬೇಕು. ಅವರಿಗೆ ಕುಡಿಸಬೇಕು. ನಂತರ ಜಿಲ್ಲಾ ಸರ್ಜನ್ನರು ಅವನ ಮರಣ ಶಾಸನಕ್ಕೆ ಸಹಿ ಹಾಕಬೇಕು. ಅಲ್ಲಿ ಅವರಿಗಾಗಿ ಕಾಲು ಬಿದ್ದು, ಲಂಚ ಕೊಟ್ಟು ಕಾಯಬೇಕು. ಇದನ್ನೆಲ್ಲ ಹಳ್ಳಿ ಯ ಜನ ಮಾಡಲಾರರು. ಇಂಥ ಕೆಲಸಕ್ಕೆ ಅವರಿಗೆ ನಾನು ಬೇಕು. ಇಂಥ ಫೋನ್ ನನಗೆ ವಾರಕ್ಕೆ ಒಂದಾದರೂ ಬರುತ್ತದೆ, ಅಂತ ಅವರು ಹೇಳಿದರು. ಅಂದರೆ ಇವರನ್ನು ಎರಡು ಸಾರಿ ಗೆಲ್ಲಿಸಿದವರು ಜೀವಂತ ಮತದಾರರಲ್ಲ. ಸತ್ತು ಹೋದವರು!

ಮತದಾರರೆಂಬ ವಿಕಲಚೇತನರು
ಪಂಚಾಯಿತಿಗಳಲ್ಲಿ ಚರ್ಚೆಗೆ ಬರುವ ವಿಷಯಗಳು ಇವು. ಡಿಸಿ ಆಫೀಸಿನವರೇ ನೀಡಿದ ರೇಷನ್ ಕಾರ್ಡನ್ನು ಡಿಸಿ ಆಫೀಸಿನವರೇ ರದ್ದು ಮಾಡಿದ್ದು. ಜಾತಿ, ಗಳಿಕೆ, ವಿಳಾಸ ಪ್ರಮಾಣ ಪತ್ರಗಳನ್ನು ಕೊಡಲು ಕಳೆದ ವರ್ಷ ೧೦೦ ರೂಪಾಯಿ ಕೇಳಿದ ತಲಾಠಿ ಈ ವರ್ಷ ೨೦೦ ರೂಪಾಯಿ ಕೇಳಿದ್ದು, ಅಂಗವಿಕಲರು, (ವಿಕಲಚೇತನರು ಎನ್ನುವುದು ತಪ್ಪು ಪದ ಬಳಕೆಯಂತೆ) ವಿಧವೆಯರು ಹಾಗೂ ನೆಲೆ ಇಲ್ಲದ ವಯಸ್ಸಾದವರಿಗೆ ಸಿಗಬೇಕಾದ ಮಾಸಾಶನಗಳು ಜಿಲ್ಲಾ ಖಜಾನೆಯಿಂದ ಬಿಡುಗಡೆಯಾದರೂ ಹಳ್ಳಿಯವರೆಗೂ ಬರಲಾರದ್ದು,

ಹಾವು ಕಡಿದು ಸತ್ತ ರೈತ ನ ಕುಟುಂಬಕ್ಕೆ ಐದು ವರ್ಷದ ಹಿಂದೆ ಬರಬೇಕಾದ ಹತ್ತು ಸಾವಿರ ರೂಪಾಯಿ ಬಂತೋ ಇಲ್ಲವೋ ಗೊತ್ತಾಗಲಾರದ್ದು, ಮಾರಾಟ ಮಾಡಿದ ಹೊಲದ ಮಾಲೀಕರ ಹೆಸರನ್ನು ಪಹಣಿ ಪತ್ರದಲ್ಲಿ ಬದಲಾಯಿಸಲು ತಹಶೀಲ್ದಾರ್ ಕಚೇರಿಗೆ ಕಳೆದ ಮೂರು ವರ್ಷದಲ್ಲಿ ೮೬ ಸಾರಿ ಹೋಗಿಬಂದರೂ ಆಗದೇ ಇರೋದು. ವರ್ಷಾನುಗಟ್ಟಲೇ ಡಾಕ್ಟರು ಇಲ್ಲದೇ ಇರುವ ಸರಕಾರಿ ಆಸ್ಪತ್ರೆಯಲ್ಲಿ ನರ್ಸು ಕೂಡ ಇಲ್ಲದೇ ಇರುವುದು, ಇಂಥವೆಲ್ಲ.

ಒಬ್ಬ ಯಶಸ್ವೀ ಜಿಲ್ಲಾ ಪಂಚಾಯಿತಿ ಸದಸ್ಯ ಇದನ್ನೆಲ್ಲಾ ಮಾಡಿಸುತ್ತಾನೆ. ಮತದಾರನ ಕೈಹಿಡಿದುಕೊಂಡು ಟೇಬಲ್ ಟೇಬಲ್ ಓಡಾಡುತ್ತಾನೆ. ಮತದಾರರ ಖರ್ಚು ಕಮ್ಮಿ ಮಾಡಿಸುತ್ತಾನೆ. ಸರಕಾರಿ ಕಚೇರಿಗಳಲ್ಲಿ ಅವರ ಮೇಲೆ ಬೀಳುವ ಅಧಿಕಾರಿಗಳು ಹಾಗೂ ದಲಾಲರ ಕ್ರೂರ ದೃಷ್ಟಿಯನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ತಪ್ಪಿಸುತ್ತಾನೆ.
ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುವ ಸಂಸ್ಕೃತಿ ಇನ್ನೂ ನಮ್ಮಲ್ಲಿ ಬಂದಿಲ್ಲ. ಜನರ ಕುಂದುಕೊರತೆಗಳು ತಂತಾನೆ ಪರಿಹಾರ ಆಗುವ ಮಟ್ಟಿಗೆ ನಮ್ಮ ವ್ಯವಸ್ಥೆ ನಮ್ಮಲ್ಲಿ ಬೆಳೆದಿಲ್ಲವಾದ್ದರಿಂದ ಇಂಥ ವಿಷಯಗಳು ನಮ್ಮ ದೇಶದಲ್ಲಿ ಇನ್ನೂ ಚುನಾವಣೆಗಳನ್ನು ನಿರ್ಧರಿಸುತ್ತವೆ.

ಯಾರಿಗೂ ಬೇಡವಾದ ಸರಕಾರದ ಷೇರು
ಹಾಗಂತ ನಗರಗಳಲ್ಲಿ ಸರಕಾರಿ ವ್ಯವಸ್ಥೆ ಸುಧಾರಿಸಿದೆ ಅಂತಲ್ಲ. ಅಲ್ಲಿ ನಮ್ಮ ದಿನ ನಿತ್ಯಕ್ಕೆ ಬೇಕಾದ ವಸ್ತು, ಹಾಗೂ ಸೇವೆಗಳನ್ನು ನೀಡಲು ಖಾಸಗಿ ಸಂಸ್ಥೆಗಳು ಇರುತ್ತವೆ.
ಉದಾಹರಣೆಗೆ ದೆಹಲಿ ಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಈಗ ನೀವು ಹಣ ಕೊಟ್ಟರೆ ಖಾಸಗಿ ಕಂಪನಿಗಳಿಂದ ನೀರು, ವಿದ್ಯುತ್, ಅಡುಗೆ ಅನಿಲ, ಫೋನು, ಮುಂತಾದವುಗಳನ್ನು ಪಡೆಯಬಹುದು. ಇನ್ನು ನಗರಗಳಲ್ಲಿರುವವರು ಬಾಡಿಗೆ ಮನೆ, ಕೆಲಸ, ಮಕ್ಕಳಿಗೆ ಸ್ಕೂಲು ಇವೆಲ್ಲಕ್ಕಾಗಿ ಸರಕಾರವನ್ನು ಅವಲಂಬಿಸುವುದನ್ನು ಬಿಟ್ಟು ಎಷ್ಟು ವರ್ಷಗಳಾದವು ಎನ್ನುವುದು ಮರೆತು ಹೋಗುವಷ್ಟು ವರ್ಷಗಳಾದವು. ನಮಗೆ ಸೇವೆ ನೀಡುವ ಕಂಪನಿ ಹೇಗೆ ನಡೆಯುತ್ತದೆ ಎಂಬುದು ನನಗೆ ತಿಳಿಯಬೇಕು ಎಂದು ಅದರ ಷೇರು ಖರೀದಿಸುವ ನಮ್ಮ ಜನ ನಮ್ಮನ್ನಾಳುವ ವರನ್ನು ಆರಿಸಲು ಮತಹಾಕುವುದಿಲ್ಲ.

ಇಂಡಿಯಾ ಸೋಲುತ್ತಿದ್ದರೂ ಸಚಿನ್ ಸೆಂಚುರಿ ಹೊಡೆಯುವುದು ಯಾಕೆ?
ಎಲ್ಲಕ್ಕಿಂತ ಮುಖ್ಯವಾಗಿ ನಗರಗಳಲ್ಲಿ ಹಳ್ಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಳ್ಳವರು ಇದ್ದಾರೆ. ಉಳ್ಳವರಿಗೆ ಚುನಾವಣೆ ದಿನ ಇಂಡಿಯಾ ಆಸ್ಟ್ರೇಲಿಯಾ ಮ್ಯಾಚ್ ನೋಡಬೇಕಾಗಿರುತ್ತದೆ. ಏನೂ ಇಲ್ಲದವರಿಗೆ ಅಭ್ಯರ್ಥಿ ನೀಡುವ ಹಣ ಹಾಗೂ ಇದ್ದಿದ್ದರಲ್ಲೇ ಹೈಕ್ವಾಲಿಟಿ ಇರುವ ಹೆಂಡ ಸಿಗುತ್ತದೆ. ಆದರೆ ಸಚಿನ್ ಸೆಂಚುರಿ ಹೊಡೆದು ಇಂಡಿಯಾ ಸೋತಮೇಲೆ, ಚಿಯರ್ ಗರ್ಲುಗಳ ಮೇಕಪ್ ಎಲ್ಲ ಬೆವರಿನಲ್ಲಿ ಹರಿದು ಹೋದಮೇಲೆ ನಮ್ಮವರು ‘ದಿನದಿಂದ ದಿನಕ್ಕೆ ಹದಗೆಡುತ್ತಿರುವ ಈ ಹೊಲಸು ರಾಜಕೀಯ’ದ ಬಗ್ಗೆ ಮಾತಾಡುತ್ತಾರೆ. “ ಚುನಾವಣೆಗಳಲ್ಲಿ ಜಾತಿ, ಹಣ, ಹೆಂಡ ಎಲ್ಲಾ ಬ್ಯಾನ್ ಮಾಡಬೇಕು. ಆ ಟೀ ಎನ್ ಶೇಷನ್ ರಾಷ್ಟ್ರಪತಿ ಆಗಿದ್ದರೆ ಇದನ್ನೆಲ್ಲ ಮಾಡುತ್ತಿದ್ದ. ಅವನನ್ನು ಎಲ್ಲರೂ ಸೇರಿ ಸೋಲಿಸಿಬಿಟ್ಟರು ~!@#*” ಅಂತ ಮನೆಯಲ್ಲಿ ನ ಸಣ್ಣ ಮಕ್ಕಳಿಗೂ ಕೂಡ ಕೇಳುವಂತೆ ಹೇಳಿ ಹೆಂಡತಿ ಯೊಂದಿಗೆ ಸಾಸ್ ಬಹೂ ನೋಡಲು ಕೂಡುತ್ತಾರೆ. ‘ಪ್ರಜಾಪ್ರಭುತ್ವ ವನ್ನು ಜೀವಂತವಾಗಿಡಲು ನಮಗಿರುವ ಕನಿಷ್ಟ ಜವಾಬ್ದಾರಿ ಮತಹಾಕುವುದು’ ಎನ್ನುವ ಟಾಟಾ ಟೀ ಜಾಹೀರಾತಿಗೆ ಟೀವಿ ಮ್ಯೂಟ್ ಮಾಡುತ್ತಾರೆ. ಒಂದು ಕ್ಷಣದ ಪಾಪಪ್ರಜ್ಞೆಯಿಂದ ಮುಕ್ತರಾಗುತ್ತಾರೆ. ರಾಜಕೀಯ ಕೆಟ್ಟು ಹೋಗಿರುವುದರಿಂದ ತಾವು ಓಟು ಹಾಕುವುದು ನಿಲ್ಲಿಸಿಲ್ಲ. ತಾವು ಓಟು ಹಾಕುವುದು ನಿಲ್ಲಿಸಿದ್ದರಿಂದ ಅದು ಕೆಟ್ಟು ಹೋಗಿದೆ ಅನ್ನುವುದು ಅವರಿಗೆ ಹೊಳೆಯುವುದಿಲ್ಲ. ಯಾಕೆಂದರೆ ಟೀ ಎನ್ ಸೀತಾರಾಮ ಅವರು ಅದನ್ನು ಇನ್ನೂ ತೋರಿಸಿಲ್ಲ! ಟೀಮಿನಲ್ಲಿನ ಇತರರು ಆಡದೇ ಇಂಡಿಯಾ ಸೋಲುತ್ತಲೇ ಹೋದರೂ ಸಚಿನ್ ಸೆಂಚುರಿ ಹೊಡೆಯುವದನ್ನು ನಿಲ್ಲಿಸುವುದಿಲ್ಲವಲ್ಲ, ಯಾಕೆ ಅಂತ ಅವರು ಒಮ್ಮೆಯೂ ತಲೆ ಕೆಡಿಸಿಕೊಂಡಿಲ್ಲ.

ಸೊಫಿಸ್ಟಿಕೇಟೆಡ್ ಮತದಾರರ ಹುಂಬ ಆಲೋಚನೆಗಳು
ಇನ್ನು ಚುನಾವಣೆಗಳಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನಿಜ. ಈ ದೇಶದಲ್ಲಿ ಎಲ್ಲಿಯವರೆಗೂ ಜಾತಿ ಆಧಾರಿತ ಭೇದಭಾವ ಇರುತ್ತದೋ, ಎಲ್ಲಿಯವರೆಗೆ ಕೆಲ ಜಾತಿಗಳಿಗೆ ಎಲ್ಲ ರಾಜಕೀಯ ಅಧಿಕಾರ ಸಿಕ್ಕು ಕೆಲ ಜಾತಿಗಳಿಗೆ ಏನೂ ಸಿಗುವುದೇ ಇಲ್ಲವೋ ಅಲ್ಲಿಯವರೆಗೆ ಚುನಾವಣೆ ಗಳಲ್ಲಿ ಜಾತಿ ಇರುತ್ತದೆ. ಅದಕ್ಕೇ ಮೇಲು ಜಾತಿಯ ಅಭ್ಯರ್ಥಿಗಳು ಕೆಳಜಾತಿಗಳ ಮತದಾರರನ್ನೂ, ಕೆಲ ಜಾತಿಯ ಅಭ್ಯರ್ಥಿಗಳು ಮೇಲು ಜಾತಿಗ ಳ ಮತದಾರರನ್ನೂ ಓಲೈಸುತ್ತಾ ನಡೆಯುತ್ತಾರೆ. ಹೊರಗಿನವರಿಗೆ ಇದು ವಿಚಿತ್ರವಾಗಿ, ಅಸಹ್ಯವಾಗಿ ಕಂಡರೂ ಈ ವ್ಯವಸ್ಥೆಯ ಒಳಗೇ ಜೀವನ ತೇಯಬೇಕಾದವರಿಗೆ ಇದು ಅನಿವಾರ್ಯ. ನಮ್ಮ ಜಾತಿಯವರು ಏನು ತಪ್ಪು ಮಾಡಿದರೂ ಪರವಾಗಿಲ್ಲ, ಅಧಿಕಾರಕ್ಕೆ ಬರಲಿ, ಅವರೇ ಮುಂದುವರೆಯಲಿ. ಇತರ ಜಾತಿಯವರು ಎಷ್ಟು ಒಳ್ಳಯೆವರಾಗಿದ್ದು, ಜನರ ಕೆಲಸ ಮಾಡಿದರೂ ಸರಿ ಅವರಿಗೊಂದು ಚಾನ್ಸ್ ಕೊಡೋದು ಬೇಡ ಎನ್ನುವ ವಿಚಾರ ಬಹಳ ಮತದಾರರ ಮನಸ್ಸಿನಲ್ಲಿ ಇದೆ. ಛೀ, ಇದೆಲ್ಲಾ ಹೊಲಸು ಎನ್ನುವ, ಜೀವನ ದಲ್ಲಿ ಒಮ್ಮೆಯೂ ಮತದಾನ ಯಂತ್ರ ನೋಡದ ಅನೇಕ ಸೊಫಿಸ್ಟಿಕೇಟೆಡ್ ನಾಗರಿಕರಲ್ಲಿಯೂ ಕೂಡ ಈ ಭಾವನೆ ಇದೆ. ಅವರು ಇದನ್ನು ಮುಕ್ತವಾಗಿ ಒಪ್ಪುವುದಿಲ್ಲ ಎನ್ನುವುದು ಅವರ ಸೊಫಿಸ್ಟಿಕೇಷನ್.

ಮತ ಹಾಕದೇ ಸೋತವರು
ಇದು ತಪ್ಪಬೇಕಾದರೆ, ಜನರ ಕೆಲಸ ಮಾಡಿದವರು, ಮಾಡುವಂಥವರು ಮುಂದೆ ಬರಲಿ, ಬೇರೆ ನೆವ ಹೇಳಿ ಮತ ಕೇಳುವವರು ಮನೆಯಲ್ಲಿ ಕೂಡಲಿ ಎನ್ನುವುದು ಆಗಬೇಕಾದರೆ, ಹೆಚ್ಚು ಜನ ಓಟು ಹಾಕಬೇಕು. ಉದಾಹರಣೆಗೆ ರಾಜ್ಯದ ಒಂದು ಮತ ಕ್ಷೇತ್ರದ ಮತದಾರರದ ಸಂಖ್ಯೆ ಸರಿ ಸುಮಾರು ೩೦,೦೦೦. ಇದರಲ್ಲಿ ಕಾಲು ಭಾಗ ಕ್ಕಿಂತ ಕಮ್ಮಿ ಮತ ಪಡೆದವರು ಗೆದ್ದಿದ್ದಾರೆ. ಯಾಕೆಂದರೆ ಅರ್ಧ ಕ್ಕಿಂತ ಹೆಚ್ಚು ಜನ ಮತಗಟ್ಟೆಗಳ ಕಡೆಗೇ ಹೋಗಿಲ್ಲ. ಗೆದ್ದ ಅನೇಕ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಿಂತ ಕೇವಲ ನೂರಿನ್ನೂರು ಮತಗಳ ಅಂತರ ದಿಂದ ಮುಂದಿದ್ದವರು. ಮತದಾನ ಹೆಚ್ಚಾಗಿದ್ದರೆ ಗೆದ್ದವರ ಗೆಲುವು ಇಷ್ಟು ಸರಳವಂತೂ ಆಗಿರುತ್ತಿದ್ದಿಲ್ಲ. ಸ್ಪರ್ಧೆ ಹೆಚ್ಚು ಆರೋಗ್ಯಕರವಾಗಿರುತ್ತಿತ್ತು. ಚುನಾವಣೆ ರಸಹೀನ ವಾಗಿರುತ್ತಿರಲಿಲ್ಲ. ಒಳ್ಳೆಯ ಅಭ್ಯರ್ಥಿಗಳು ಗೆದ್ದು ಬರುತ್ತಿದ್ದರೋ ಇಲ್ಲವೋ, ಬರುವ ಸಾಧ್ಯತೆಯಂತೂ ಹೆಚ್ಚಿರುತ್ತಿತ್ತು. ನಮ್ಮ ಜನ ಬೇಕಾದವರನ್ನು ಗೆಲ್ಲಿಸಲು ಮತ ಹಾಕುವುದು ಹಾಗಿರಲಿ, ಬೇಡವಾದವರನ್ನು ಸೋಲಿಸಲು ಮತ ಹಾಕಿದರೆ ಸಾಕಿತ್ತು. ಅದೂ ಆಗಿಲ್ಲ.

ಆ ಗತ್ತು ಆಗಿತ್ತು, ಈಗಿಲ್ಲ
ಆದರೆ ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದ ತಕ್ಷಣ ಯಡಿಯೂರಪ್ಪ ಅವರಿಗೆ ಇದ್ದ ಆತ್ಮವಿಶ್ವಾಸ, ಗತ್ತು ಈಗ ಇಲ್ಲ. ಯಾಕಿರಬಹುದು? ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಹೀಗೆ: “ನಾವು ೩೦ ರಲ್ಲಿ ೨೦ ಜಿಲ್ಲಾ ಪಂಚಾಯಿತಿ ಗೆಲ್ಲುತ್ತೇವೆ. ೧೭೬ ತಾಲೂಕು ಪಂಚಾಯಿತಿಗಳಲ್ಲಿ ೧೦೦ಕ್ಕೂ ಹೆಚ್ಚರಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಇರುತ್ತಾರೆ”. ಇದು ಆಗಲಿಲ್ಲ. ಏನು ತಪ್ಪಾಯಿತು?

ಚುನಾವಣೆಯೊಂದಿಗೆ ರಾಯರ ಪ್ರಣಯ
ಮೊದಲನೇಯ ಸಾಧ್ಯತೆ ಇದು. ಚುನಾವಣೆ ಯಲ್ಲಿ ಚರ್ಚೆಗೆ ತಕ್ಕ ವಿಷಯ ಅಂತ ಯಾವುದೂ ಇರಲಾರದ್ದರಿಂದ ಜನರಲ್ಲಿ ಈ ರಾಜಕೀಯ ಆಯ್ಕೆಯ ಆಟದಲ್ಲಿ ಆಸಕ್ತಿ ಇರಲಿಲ್ಲ. ಕೇಂದ್ರದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿ ಸರಕಾರಗಳು ಶಿವರಾಜ ಪಾಟೀಲರ ಶರ್ಟಿನಂತೆ ಬದಲಾಗುತ್ತಿದ್ದಾಗ ಒಂದು ಜೋಕ್ ಇತ್ತು. ‘ಈಗ ಚುನಾವಣೆಯಾದರೆ ಯಾರಿಗೆ ಲಾಭ? ಪ್ರಣಯ ರಾಯ್ ಗೆ ಮಾತ್ರ. ಯಾಕೆಂದರೆ ಅವರು ಗಂಟೆಗಟ್ಟಲೇ ಚುನಾವಣಾ ವಿಶ್ಲೇಷಣೆ ಮಾಡುತ್ತಾರೆ, ಜನ ಕೆಲಸ ಬಿಟ್ಟು ನೋಡುತ್ತಾರೆ, ಅದರಿಂದ ಅವರಿಗೆ ಜಾಹೀರಾತಿನಲ್ಲಿ ಹಣ ದೊರೆಯುತ್ತದೆ! ಆಗ ಅದು ಬೇರೆ ಯಾರಿಗೂ ಬೇಕಾಗಿರಲಿಲ್ಲ. ಈಗ ಕೂಡ ಚುನಾವಣೆಯಲ್ಲಿ ಆಸಕ್ತಿ ಇದ್ದದ್ದು ಪತ್ರಿಕೆ, ಟೀವಿಗಳಿಗೆ ಮಾತ್ರ.

ಕಣ್ಣೀರಿನ ಲಗೋರಿ
ಎರಡನೆಯ ಸಾಧ್ಯತೆ ಇದು. ‘ಗೌಡರು ಹಾಗೂ ಅವರ ಮಕ್ಕಳು ನಾನು ಬಾಲು ಹಾಕಿದಾಗ ಸಿಕ್ಸು ಹೊಡೆದರು, ನನ್ನ ಪಾಳಿ ಬಂದಾಗ ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿ ಕೊಂಡು ಓಡಿಹೋದರು’ ಅಂತ ಯಡಿಯೂರಪ್ಪ ನವರು ಕಣ್ಣೀರು ಸುರಿಸಿಕೊಂಡು ಜನರ ಬಳಿಗೆ ಬಂದಾಗ ಅಯ್ಯೋ ಪಾಪ ಎಂದ ಜನ ಈಗ ಹಾಗನ್ನುತ್ತಿಲ್ಲ. ಜನರಿಗೆ ತಮ್ಮ ಗೋಳನ್ನು ಕೇಳಿ ಕಣ್ಣೀರು ಒರೆಸುವವರು ಬೇಕಾಗಿದ್ದಾರೆ. ಇತರರ ಕಣ್ಣೀರು ಅವರ ಭಾವನೆಗಳನ್ನು ಹಿಂದಿನಂತೆ ಜಾಗೃತ ಗೊಳಿಸುತ್ತಿಲ್ಲ. ಇದರ ಉದಾಹರಣೆಗಳು ಶಿವವೊಗ್ಗ, ಚಿತ್ರದುರ್ಗ, ಕೋಲಾರ ಹಾಗೂ ಇನ್ನು ಕೆಲವು ಜಿಲ್ಲೆಗಳು.

ಆಗ ನಾನು ಔಟ್, ಈಗ ನೀನು ಔಟ್
ಮೂರನೇಯ ಸಾಧ್ಯತೆ ಇದು. ತಮ್ಮ ತಮ್ಮ ಜಿಲ್ಲೆಯ ಚುನಾವಣೆಗಳನ್ನು ಕೆಲವು ಎಮ್ಮೆಲ್ಲೆಗಳು ಗಂಭೀರವಾಗಿ ತೆಗೆದುಕೊಂಡಿದ್ದು. ಇದರಿಂದ ಕೆಲವು ಕಡೆ ಕೆಲವು ಜನ ಗೆದ್ದಿದ್ದಾರೆ, ಕೆಲವರನ್ನು ಸೋಲಿಸಲಾಗಿದೆ. ಯಡಿಯೂರಪ್ಪ ಅವರ ಸರಕಾರದ ಉಳಿವಿನ ಮಹಾನಾಟಕದಲ್ಲಿ ಸದನದಿಂದ ಹೊರನಿಲ್ಲಬೇಕಾದ ೧೬ ಜನ ಬಿಜೆಪಿ ವಿರುದ್ಧ ದ ಹೋರಾಟವನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದಿರಬಹುದು. ಇದು ಆಡಳಿತ ಪಕ್ಷದ ಪ್ರಭಾವವನ್ನು ಆ ಕ್ಷೇತ್ರಗಳಲ್ಲಿ ಕುಗ್ಗಿಸಿದೆ. ಇದಕ್ಕೆ ಉದಾಹರಣೆಗಳು ರಾಯಚೂರು, ಕೊಪ್ಪಳ, ಕಾರವಾರ ಮುಂತಾದವು.

ಇನ್ನು ಸ್ವಲ್ಪ ಕಡೆಗಳಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಿದಂತೆ ಕಾಣುತ್ತದೆ. ಜನರಲ್ಲಿ ಇರಬಹುದಾದ ಅಸಮಾಧಾನಕ್ಕೆ ಗಾಳಿ ಹಾಕಿ, ಆಡಳಿತ ಪಕ್ಷ ದ ಅಭ್ಯರ್ಥಿಗೆ ಪರ‍್ಯಾಯವಾಗಬಹುದಾದ ಅಭ್ಯರ್ಥಿಯನ್ನು ಹುಡುಕಿ, ಮತದಾರರು ಮತಗಟ್ಟೆಗೆ ಬರುವಂತೆ ಪುಸಲಾಯಿಸಲು ಓಡಾಡಿದ ವಿರೋಧ ಪಕ್ಷದ ನಾಯಕರ ಜಿಲ್ಲೆ, ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕ್ಕೆ ಜನವರಿಯ ಚಳಿಯಲ್ಲೂ ಬೆವರು ಒಡೆದಿದೆ. ಲೆಕ್ಕಾಚಾರ ತಪ್ಪಾಗಿದೆ. ಇದಕ್ಕೆ ಉದಾಹರಣೆಗಳು ಗುಲ್ಬರ್ಗಾ, ಬಳ್ಳಾರಿ, ಚಿಕ್ಕಬಳ್ಳಾಪುರ ಇರಬಹುದು. ಆದರೆ ಇಂಥವು ಕಮ್ಮಿ.

ಯಮುನೆಯೋ, ಕೃಷ್ಣೆಯೋ ಕಾವೇರಿಯೋ?
ಇಷ್ಟೆಲ್ಲಾ ಆದ ನಂತರ ಯಡಿಯೂರಪ್ಪ ಅವರು ಇಲ್ಲೇ ಇರುತ್ತಾರೋ ಅಥವಾ ದಿನಾ ಬೆಳಿಗ್ಗೆ ದೆಹಲಿ ಯ ಜಮುನಾ ನದಿ ನೀರು ಕುಡಿಯು ವ ತಮ್ಮ ಆಸೆ ಯನ್ನು ಪೂರೈಸಿಕೊಳ್ಳುತ್ತಾರೋ? ಪ್ರಶ್ನೆ ಕಠಿಣ. ಆದರೆ ಉತ್ತರ ಸರಳ. ಅವರು ಸೋತು ಹೋಗಿ, ಬೇರೆ ದಾರಿ ಇಲ್ಲದೇ ರಾಜ್ಯಸಭೆ ಸದಸ್ಯನಾಗಿ ಈ ವಯಸ್ಸಿನಲ್ಲಿ ಹಿಂದಿ ಕಲಿಯುವ ಪರಿಸ್ಥಿತಿ ಅವರಿಗೆ ಬರಲಿಲ್ಲ. ಇನ್ನು ಭಾರಿ ಜಯ ಸಾಧಿಸಿ, ವಿರೋಧಿಗಳ ಬಾಯಿಮುಚ್ಚಿಸಿ, ಪತ್ರಿಕೆಗಳಿಗೆ ಮೌನ ವೃತದ ದೀಕ್ಷೆ ಕೊಟ್ಟು, ‘ನನ್ನ ಇನ್ನಿಂಗ್ಸ್ ಆಗಿದೆ, ಇನ್ನು ಯುವಕರ ಆಟ’ ಅಂತ ಇನ್ನೊಬ್ಬ ನಾಯಕರನ್ನು ಆಡಲು ಬಿಡುವಷ್ಟು ದೊಡ್ಡ ಯಶಸ್ಸೂ ಅವರ ಕೈ ಸೇರಲಿಲ್ಲ.

ಬೆಂಗಳೂರಿನಲ್ಲಿ ತಿರುವಳ್ಳುವರ್ ಮೂರ್ತಿ ಕೂಡಿಸಿ, ಚೆನ್ನೈನಲ್ಲಿ ಸರ್ವಜ್ಙನನ್ನು ನಿಲ್ಲಲು ಬಿಟ್ಟು ಕಾವೇರಿ ಕಿರಿಕಿರಿ ತಪ್ಪಿಸಿಕೊಂಡ ಅವರು, ನಮ್ಮ ಪಾಲಿನ ಕೃಷ್ಣೆಯ ನೀರನ್ನು ಪೂರಾ ಬಳಸಿಕೊಳ್ಳಲು ಡ್ಯಾಮ್ ಕಟ್ಟಿ, ಕಾಲುವೆ ಅಗೆಯುವ ತಯ್ಯಾರಿಯಲ್ಲಿ ಸಫಾರಿ ತೆಗೆದು ಇಡುವುದು ಒಳಿತು. ಮುಂದಿನ ಮೂರು ವರ್ಷದ ಬೇಸಿಗೆಗಳಲ್ಲಿ ಅವರು ಜಮುನಾ ನದಿ ನೀರಿನ ರುಚಿ ನೋಡುವ ಸಾಧ್ಯತೆ ಕಡಿಮೆ.

ಎಲ್ಲಾ ಸರಿ, ಆದರೆ ಈ ಪಂಚಾಯಿತಿ ಎಂದರೇನು? ಈ ಪಂಚಾಯಿತಿ ಗಳಿಂದ ನನಗೇನಾದರೂ ಒಳ್ಳೆಯದಾಗುತ್ತದೆಯೇ? ಇದರಿಂದ ಯಾರಿಗಾದರೂ ಏನಾದರೂ ಒಳ್ಳೆಯದಾಗುತ್ತದೆಯೇ? ಈ ವಿಚಾರಗಳನ್ನು ಆಮೇಲೆ ನೋಡೋಣ.
ಈಗ ಇಲ್ಲಿಗೆ ಮುಗಿಯಿತು.
Print Close

Comments

Popular posts from this blog

``All Muslims are not Terrorists, But all Terrorists are Muslims''

Gowda and Gore

Black Buck resort in Bidar by Jungle Lodges and Resorts